ಉ.ಕ ಸುದ್ದಿಜಾಲ ಚಿಕ್ಕೋಡಿ :

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕೆ.ಯಲ್ಲಾಪುರ ಗ್ರಾಮದಲ್ಲಿ 2018 ರಲ್ಲಿ ನಡೆದ ಕೊಲೆ ಸಾಬೀತಾಗಿದ್ದರಿಂದ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 21 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಕೆ.ಯಲ್ಲಾಪುರ ಗ್ರಾಮದ ಲಗಮಣ್ಣ ಸೋಮಲಿಂಗ ಸನದಿ (42) ಶಿಕ್ಷೆಗೆ ಒಳಗಾದವರು. ಮಲ್ಲಿಕಾರ್ಜುನ ಸುಭಾಷ ಕಮ್ಮಾರ (27) ಕೊಲೆಯಾದವರು. ಇವರ ತಂದೆ ಸುಭಾಷ ಹಾಗೂ ಸಂಬಂಧಿ ಭೀಮಪ್ಪ ಕೂಡ ಘಟನೆಯಲ್ಲಿ ಗಾಯಗೊಂಡಿದ್ದರು.

ಲಗಮಣ್ಣ ಹಾಗೂ ಮಲ್ಲಿಕಾರ್ಜುನ ಮಧ್ಯೆ ವೈಯಕ್ತಿಕ ಕಾರಣಕ್ಕೆ ನಡೆದ ಸಣ್ಣಪುಟ್ಟ ಜಗಳಗಳು ವಿಕೋಪಕ್ಕೆ ಹೋಗಿ 2018ರಲ್ಲಿ ಕೊಲೆ ನಡೆದಿತ್ತು. ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ಬಿ.ಎಸ್.ತಳವಾರ, ಸಿಪಿಐ ಎಸ್‌.ಪಿ.ಮುರಗೋಡ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಎಸ್‌.ಎಲ್‌.ಚವ್ಹಾಣ ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವೈ.ಜಿ.ತುಂಗಳ ವಾದ ಮಂಡಿಸಿದ್ದರು.

ಕೊಲೆ ಮಾಡಿದ ವ್ಯಕ್ತಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಲಿಂಗದಾಳ ಗ್ರಾಮದಲ್ಲಿ 2020ರಲ್ಲಿ ನಡೆದ ಕೊಲೆ ಪ್ರಕರಣ ಸಾಬೀತಾದ್ದರಿಂದ, ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಅಪರಾಧಿಗೆ 7 ವರ್ಷ 4 ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದೆ.

ಲಿಂಗದಾಳ ಗ್ರಾಮದ ಮಹಾದೇವ ಬಸಪ್ಪ ಹುಲ್ಲಿಕೇರಿ ಶಿಕ್ಷೆಗೆ ಒಳಗಾದವ. ಅದೇ ಗ್ರಾಮದ ಸೋಮಪ್ಪ ಯಲ್ಲಪ್ಪ ಉಪ್ಪಾರ ಹತ್ಯೆಯಾದವರು.

ಮಹಾದೇವಪ್ಪ ತನ್ನ ಮಗಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಸಂಶಯದಿಂದ ಸೋಮಪ್ಪ ಕರಿಯಮ್ಮ ದೇವಿ ಗುಡಿಯ ಮುಂಭಾಗ ಹಲ್ಲೆ ಮಾಡಿದ್ದ. ಅಂದಿನಿಂದ ಇವರಿಬ್ಬರ ನಡುವೆ ವೈಮನಸ್ಸು ಬೆಳೆದಿತ್ತು. ಕೆಲ ವರ್ಷಗಳಿಂದ ಹಾಗೇ ಮುಂದುವರಿದಿತ್ತು.

2020 ಜುಲೈ 24ರಂದು ಮಧ್ಯಾಹ್ನ ಕರಿಯಮ್ಮನ ಗುಡಿ ಬಳಿ‌ ಸೋಮಪ್ಪ ಹಾಗೂ ಮಹಾದೇವ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಮಹಾದೇವನು ಕೊಡಲಿಯಿಂದ ಸೋಮಪ್ಪನ ಕುತ್ತಿಗೆ ಹೊಡೆದು ಹತ್ಯೆ ಮಾಡಿದ್ದ. ಈ ಬಗ್ಗೆ ಸಾವಕ್ಕ ಉಪ್ಪಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿಪಿಐ ಎಲ್‌.ಆರ್.ಮಸಗುಪ್ಪಿ ಹಾಗೂ ಶಶಿಕಾಂತ ವರ್ಮಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಎಲ್‌.ವಿಜಯಲಕ್ಷ್ಮೀ ದೇವಿ ಅವರು, ಸಾಕ್ಷ್ಯಾಧಾರಗಳ ಪರಿಶೀಲಿಸಿ ಮಹಾದೇವ ಬಸಪ್ಪ ಹುಲ್ಲಿಕೇರಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾರಾಯಣ ಆರಿ ವಾದ ಮಂಡಿಸಿದ್ದಾರೆ.