ಉ.ಕ ಸುದ್ದಿಜಾಲ ಬೆಂಗಳೂರು :

ರಾಜ್ಯದ ಬಜೆಟ್ ಇತಿಹಾಸ 21ಕೋಟಿಯಿಂದ ಆರಂಭವಾಗಿ 3.71 ಲಕ್ಷ ಕೋಟಿ ರೂ.ಗೆ ತಲುಪಿದೆ. ಸಿಎಂ ಸಿದ್ದರಾಮಯ್ಯ ಅವರು ಇದೇ ಮಾರ್ಚ್‌ 7ರಂದು ರಾಜ್ಯ ಬಜೆಟ್‌ ಮಂಡಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ.

ರಾಜ್ಯದ ಬಜೆಟ್ ಇತಿಹಾಸ 21 ಕೋಟಿ ರೂ‌. ನಿಂದ ಆರಂಭವಾಗಿ ಇದೀಗ 3.71 ಲಕ್ಷ ಕೋಟಿ ರೂ.ಗೆ ತಲುಪಿದೆ. ರಾಜ್ಯ ಬಜೆಟ್ ಮೈಲಿಗಲ್ಲುಗಳ ವಿಶೇಷ ವರದಿ ಇಲ್ಲಿದೆ. ಕರ್ನಾಟಕ ದೇಶದ ಮಂಚೂಣಿಯಲ್ಲಿನ ಪ್ರಗತಿಶೀಲ ರಾಜ್ಯ. ಆರ್ಥಿಕವಾಗಿ ಸದೃಢವಾಗುವ ಮೂಲಕ ಕರ್ನಾಟಕ ದೇಶದ ಅಭಿವೃದ್ಧಿಶೀಲ ರಾಜ್ಯಗಳಲ್ಲಿ ಅಗ್ರಗಣ್ಯವಾಗಿದೆ.

ರಾಜ್ಯ ಪ್ರಸ್ತುತ 28 ಲಕ್ಷ ಕೋಟಿ ರೂ. ಜಿಡಿಪಿ ಹೊಂದಿದೆ. ರಾಜ್ಯದ ಬಜೆಟ್ ಗಾತ್ರ ವರ್ಷಂಪ್ರತಿ ಏರುಮುಖವಾಗಿಯೇ ಮುನ್ನುಗ್ಗುತ್ತಿದೆ. ಆರ್ಥಿಕ ಚಟುವಟಿಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿರುವುದರಿಂದ ರಾಜ್ಯದ ಆಯವ್ಯಯದ ಗಾತ್ರವೂ ಬೃಹದಾಕಾರವಾಗಿ ಬೆಳೆಯುತ್ತಿದೆ. ಬಜೆಟ್ ಗಾತ್ರವು ರಾಜ್ಯದ ಆರ್ಥಿಕತೆಯ ಪ್ರಮಾಣ, ಅಭಿವೃದ್ಧಿಶೀಲತೆ, ಆರ್ಥಿಕ ಚಟುವಟಿಕೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ‌.

21 ಕೋಟಿಯಿಂದ 3.71 ಲಕ್ಷ ಕೋಟಿ ರೂ.ಗೆ ಹಿಗ್ಗಿದ ಬಜೆಟ್ ಗಾತ್ರ :

ರಾಜ್ಯದ ಬಜೆಟ್ ಗಾತ್ರ ಆರಂಭದಲ್ಲಿ ಇದ್ದಿದ್ದು ಕೇವಲ 21 ಕೋಟಿ ರೂಪಾಯಿ. 21 ಕೋಟಿ ರೂ. ರಾಜ್ಯದ ಮೊದಲ ಬಜೆಟ್ ಗಾತ್ರವಾಗಿತ್ತು. ಅದೇ ಗಾತ್ರದಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆ, ಆರ್ಥಿಕ ಚಟುವಟಿಕೆ ಇತ್ತು. ಬಳಿಕ ವರ್ಷಂಪ್ರತಿ ರಾಜ್ಯದ ಬಜೆಟ್ ಗಾತ್ರ ಹಿಗ್ಗುತ್ತಾ ಹೋಯಿತು. 21 ಕೋಟಿ ರೂ. ನಿಂದ ಪ್ರಾರಂಭವಾದ ರಾಜ್ಯದ ಬಜೆಟ್ ಯಾತ್ರೆ ಈಗ 3.71 ಲಕ್ಷ ಕೋಟಿ ರೂ.ಗೆ ಹೋಗಿ ತಲುಪಿದೆ.

ಕರ್ನಾಟಕ ಏಕೀಕರಣದ ಬಳಿಕ 1952-53ರಲ್ಲಿ ಅಂದಿನ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ರಾಜ್ಯದ ಮೊದಲ ಮುಂಗಡ ಪತ್ರವನ್ನು ಮಂಡಿಸಿದ್ದರು. ಕೆಂಗಲ್ ಅವರು ಮಂಡಿಸಿದ್ದ ಮೊದಲ ಬಜೆಟ್ ಗಾತ್ರ 21.03 ಕೋಟಿ ರೂ. ಆಗಿನ ಆರ್ಥಿಕತೆಯ ಇತಿಮಿತಿಯೊಳಗೆ ಕೆಂಗಲ್‌ ಹನುಮಂತಯ್ಯ ಅವರು ಒಟ್ಟು 4 ಬಜೆಟ್‌ ಮಂಡಿಸಿದ್ದರು.

ಕೆಂಗಲ್ ಅವರ ಕಡೆಯ ಆಯವ್ಯಯದ ಗಾತ್ರ 30 ಕೋಟಿ ರೂ. ಆಗಿತ್ತು. ಕೆಂಗಲ್‌ ಬಳಿಕ ವಿತ್ತ ಸಚಿವರಾದ ಟಿ. ಮರಿಯಪ್ಪ 1957-58ರಲ್ಲಿ ಬಜೆಟ್ ಮಂಡಿಸಿದರು. ಆ ವೇಳೆಗೆ ಬಜೆಟ್ ಗಾತ್ರ 60.28 ಕೋಟಿ ರೂ.ಗೆ ಏರಿಕೆಯಾಗಿತ್ತು. ಆದರೆ, ಮರು ವರ್ಷ 1958-59ರಂದು ಮಂಡಿಸಿದ್ದ ಆಯ-ವ್ಯಯದ ಗಾತ್ರ 50.82 ಕೋಟಿ ರೂ.ಗೆ ಕುಗ್ಗಿತ್ತು.

ಶತಕದ ಮೈಲಿಗಲ್ಲು ಮುಟ್ಟಿಸಿದ ಕಂಠಿ :

ರಾಜ್ಯದ ಬಜೆಟ್ ಗಾತ್ರವನ್ನು ಮೊದಲ ಬಾರಿಗೆ ಶತಕ ದಾಟಿಸಿದ ಕೀರ್ತಿ ಎಸ್. ಆರ್ ಕಂಠಿ ಅವರಿಗೆ ಸಲ್ಲುತ್ತದೆ. ಏಕೈಕ ಬಜೆಟ್‌ ಮಂಡಿಸಿದ್ದ ಎಸ್‌. ಆರ್‌ ಕಂಠಿ ಅವರು, 1962-63ರಲ್ಲಿ ಬಜೆಟ್ ಗಾತ್ರವನ್ನು 102.93 ಕೋಟಿ ರೂ. ಗಡಿ ದಾಟಿಸಿದ್ದರು. ಆ ಮೂಲಕ ರಾಜ್ಯದ ಬಜೆಟ್ ಗಾತ್ರ ಶತಕದ ಮೈಲಿಗಲ್ಲು ಮುಟ್ಟಿತ್ತು.

ದ್ವಿಶತಕದ ಮೈಲಿಗಲ್ಲು ತಲುಪಿಸಿದ್ದು ಹೆಗಡೆ :

ರಾಜ್ಯದ ಬಜೆಟ್ ಗಾತ್ರವನ್ನು ದ್ವಿಶತಕದ ಆಚೆಗೆ ಕೊಂಡೊಯ್ದ ಹೆಗ್ಗಳಿಕೆ ರಾಮಕೃಷ್ಣ ಹೆಗಡೆಗೆ ಸಲ್ಲುತ್ತದೆ. 1966-67ರಿಂದ 1971-72ರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಹೆಗಡೆ ಅವರು 6 ಬಜೆಟ್‌ ಮಂಡಿಸಿದ್ದರು. ಅಂದು ಅವರು ರಾಜ್ಯದ 1969-70 ಆಯವ್ಯಯದ ಗಾತ್ರವನ್ನು 22,648 ಕೋಟಿ ರೂ. ಗೆ ಏರಿಸಿದ್ದರು. ಬರೋಬ್ಬರಿ 13 ಬಾರಿ ರಾಜ್ಯ ಬಜೆಟ್ ಮಂಡನೆ ಮಾಡಿದ್ದರು. ಸಿಎಂ ಆಗಿ ರಾಮಕೃಷ್ಣ ಹೆಗಡೆ ಅವರು 1985-86 ರಲ್ಲಿ ಮಂಡಿಸಿದ ಬಜೆಟ್ ಗಾತ್ರ 2,078 ಕೋಟಿ ರೂ. ಆಗಿತ್ತು. ಅದಾದ ಬಳಿಕ ಮಂಡಿಸಿದ ಬಜೆಟ್ ಗಾತ್ರವನ್ನು 3 ಸಾವಿರ ಕೋಟಿ ರೂ. ದಾಟಿಸುವ ಮೂಲಕ ದಾಖಲೆ ಬರೆದಿದ್ದರು.

ಬಜೆಟ್ ಗಾತ್ರ ಸಾವಿರದ ಗಡಿ ದಾಟಿಸಿದ್ದು ಮೊಯ್ಲಿ :

ರಾಜ್ಯದ ಬಜೆಟ್ನ್ನು ಸಾವಿರದ ಗಡಿ ದಾಟಿಸಿದ ಕೀರ್ತಿ ಆಗಿನ ವಿತ್ತ ಸಚಿವ ವೀರಪ್ಪ ಮೊಯ್ಲಿಗೆ ಸಲ್ಲುತ್ತದೆ. ಅವರು 1982-83ರಲ್ಲಿ ಮಂಡಿಸಿದ ಬಜೆಟ್‌ ಗಾತ್ರ 1,178,66 ಕೋಟಿ ರೂ. ಆಗಿತ್ತು. ಬಳಿಕ 4 ಸಾವಿರ ಕೋಟಿ ರೂ. ಗೆ ಬಜೆಟ್‌ ಮೊತ್ತ ವಿಸ್ತರಿಸಿದವರು ಎಂ. ರಾಜಶೇಖರಮೂರ್ತಿ ಅವರು 1990-91 ರಲ್ಲಿ 4,010,23 ಕೋಟಿ ರೂ. ಆಯವ್ಯಯ ಮಂಡಿಸಿದ್ದರು. 1992-93 ರಲ್ಲಿ ಎಸ್. ಬಂಗಾರಪ್ಪ 5,677 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು.

10 ಸಾವಿರ ಕೋಟಿಗೆ ಹಿಗ್ಗಿಸಿದವರು ಸಿದ್ದರಾಮಯ್ಯ :

ರಾಜ್ಯದ ಬಜೆಟ್ ಗಾತ್ರವನ್ನು 10,000 ಸಾವಿರ ಕೋಟಿ ರೂ. ಗಾತ್ರಕ್ಕೆ ಹಿಗ್ಗಿಸಿದ ಹಿರಿಮೆ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಅವರು 1995-96 ರಲ್ಲಿ 10,859 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದ್ದರು. 2000-01ರಲ್ಲಿ ಎಸ್. ಎಂ ಕೃಷ್ಣ ಅವರು 20,061 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಿದ್ದರು. 2004-05 ರಲ್ಲಿ ಅವರು 30,285 ಕೋಟಿ ರೂ. ಗೆ ಬಜೆಟ್ ಗಾತ್ರವನ್ನು ಹಿಗ್ಗಿಸಿದರು.

50,000 ಕೋಟಿ ರೂ. ತಲುಪಿಸಿದ್ದು ಬಿಎಸ್ವೈ :

ರಾಜ್ಯದ ಬಜೆಟ್ ಗಾತ್ರವನ್ನು 50 ಸಾವಿರ ಕೋಟಿಯ ಗಡಿ ದಾಟಿಸಿದ ಕೀರ್ತಿ ಬಿ. ವೈ ಯಡಿಯೂರಪ್ಪಗೆ ಸಲ್ಲುತ್ತದೆ. ಅವರು 2008-09ರಲ್ಲಿ ಮಂಡಿಸಿದ ಬಜೆಟ್ ಗಾತ್ರ 55,313 ಕೋಟಿ ರೂ.ಗೆ ತಲುಪಿತ್ತು.

ಲಕ್ಷ ಕೋಟಿಯ ಗಡಿ ದಾಟಿಸಿದವರು ಡಿವಿಎಸ್ :

ರಾಜ್ಯದ ಬಜೆಟ್ ಮೊದಲ ಬಾರಿಗೆ ಲಕ್ಷ ಕೋಟಿಯ ಗಡಿ ದಾಟಿಸಿದ್ದ ಹಿರಿಮೆ ಅಂದಿನ ಸಿಎಂ ಡಿ. ವಿ ಸದಾನಂದ ಗೌಡರಿಗೆ ಸಲ್ಲುತ್ತದೆ. ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಬಜೆಟ್‌ ಮೊದಲ ಬಾರಿಗೆ 1 ಲಕ್ಷ ಕೋಟಿ ರೂಪಾಯಿ ದಾಟಿತ್ತು. 2012-13 ರಲ್ಲಿ ಡಿ. ವಿ ಸದಾನಂದಗೌಡ 1.02 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿದ್ದರು.

2 ಲಕ್ಷ ಕೋಟಿಗೆ ತಲುಪಿಸಿದ್ದು ಸಿದ್ದರಾಮಯ್ಯ :

ರಾಜ್ಯದ ಬಜೆಟ್ ಗಾತ್ರ 2 ಲಕ್ಷ ಕೋಟಿ ರೂ. ಗಡಿ ದಾಟಿಸಿದ್ದು, ಸಿದ್ದರಾಮಯ್ಯ. 2018-19ರಲ್ಲಿ ಸಿದ್ದರಾಮಯ್ಯ ಅವರು 2.14 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಅವರು 2015-16ರಲ್ಲಿ 1,42,534 ಕೋಟಿ ರೂ. 2016-17ನೇ ಸಾಲಿನಲ್ಲಿ 1,63,419 ಕೋಟಿ ರೂ. ಹಾಗೂ 2017-18ನೇ ಸಾಲಿನಲ್ಲಿ 1,86,561 ಕೋಟಿ ರೂ. ಬಜೆಟ್ ಮಂಡಿಸಿ 2018-19ನೇ ಸಾಲಿನಲ್ಲಿ ಬಜೆಟ್ ಗಾತ್ರವನ್ನು 2 ಲಕ್ಷ ಕೋಟಿ ರೂ. ಗಡಿಯನ್ನು ದಾಟಿಸಿದರು.

3 ಲಕ್ಷ ಕೋಟಿ ಗಡಿ ದಾಟಿಸಿದ ಬೊಮ್ಮಾಯಿ :

ರಾಜ್ಯದ ಬಜೆಟ್ ಗಾತ್ರವನ್ನು 3 ಲಕ್ಷ ಕೋಟಿ ರೂ. ಗಡಿ ದಾಟಿಸಿದ ಕೀರ್ತಿ ಬಸವರಾಜ್ ಬೊಮ್ಮಾಯಿಗೆ ಸಲ್ಲುತ್ತದೆ. 2023-24ರ ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ಗಾತ್ರ 3.03 ಲಕ್ಷ ಕೋಟಿ ರೂ. ತಲುಪಿತು. ಅಲ್ಲಿಗೆ ರಾಜ್ಯದ ಬಜೆಟ್ ಗಾತ್ರ ಮೂರು ಲಕ್ಷ ಕೋಟಿಯ ಮೈಲಿಗಲ್ಲು ತಲುಪಿತು‌‌.

ಬಳಿಕ ಚುನಾವಣೆ ಬಳಿಕ ಸಿಎಂ ಸಿದ್ದರಾಮಯ್ಯ ಪೂರ್ಣಕಾಲಿಕ ಬಜೆಟ್ನ್ನು ಜುಲೈನಲ್ಲಿ ಮಂಡಿಸಿದ್ದರು. ಸಿಎಂ ಸಿದ್ದರಾಮಯ್ಯ 2023-24ನೇ ಜುಲೈನಲ್ಲಿ ಮಂಡಿಸಿದ ಪೂರ್ಣ ಪ್ರಮಾಣದ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂ. ಆಗಿತ್ತು. 2024-25ನೇ ಸಾಲಿನಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಗಾತ್ರವನ್ನು 3.71 ಲಕ್ಷ ಕೋಟಿ ರೂ‌.ಗೆ ಕೊಂಡೊಯ್ದಿದ್ದರು.