ಉ.ಕ ಸುದ್ದಿಜಾಲ ಮೈಸೂರು :

ಸಿದ್ದರಾಮಯ್ಯನವರು ನಮ್ಮ ಮುಖ್ಯಮಂತ್ರಿಗಳು. ಅವರು ಐದು ವರ್ಷ ಅಧಿಕಾರದಲ್ಲಿ ಇರುತ್ತಾರೋ, ಅಥವಾ ಮೂರು ವರ್ಷ ಇರುತ್ತಾರೋ ಎಂಬುದು ನನಗೆ ಗೊತ್ತಿಲ್ಲ. ಅದನ್ನು ನೀವು ಹೈಕಮಾಂಡ್​ ಜೊತೆ ಕೇಳಿ ಎಂದು ಸಚಿವ ಸತೀಶ್​ ಜಾರಕಿಹೊಳಿ ಹೇಳಿಕೆ ನೀಡಿದರು.

ಮೈಸೂರಿನಲ್ಲಿ ಮಾಧ್ಯಮಗಳ ಸಿಎಂ ಬದಲಾವಣೆ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನಾನು ಮೈಸೂರಿಗೆ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿದ್ದೇನೆ. ರಾತ್ರಿಯವರೆಗೆ ಇದ್ದು, ಉಸ್ತುವಾರಿ ಸಚಿವ ಮಹದೇವಪ್ಪ ಅವರ ಜತೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ.

ಸಿದ್ದರಾಮಯ್ಯ ಅವರೇ ಸದ್ಯ ಮುಖ್ಯಮಂತ್ರಿ, ಅದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ನಾವು ಅವರ ಜತೆ ಸಚಿವರಾಗಿ ಕೆಲಸ ಮಾಡುತ್ತೇವೆ. ಸದ್ಯ ಸಿಎಂ ಬದಲಾವಣೆ ಪ್ರಶ್ನೆ ಉದ್ಭವಿಸುವುದಿಲ್ಲ. ಆ ರೀತಿಯ ಚರ್ಚೆಗಳು ನಡೆದಿಲ್ಲ. ಇದು ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆಯಷ್ಟೇ.

ಈ ಪಕ್ಷದವರು ಪ್ರೀತಿಯಿಂದ ನಮ್ಮ ಹೆಸರನ್ನು ಹೇಳುತ್ತಿದ್ದಾರೆ. ಆ ರೀತಿಯ ಬೆಳವಣಿಗೆ ನಡೆದಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ ಎಂದರು.

ನಮ್ಮ ಬೆಂಬಲಿಗರು ಮುಂದಿನ ಸಿಎಂ ಎಂದು ಕಾರ್ಯಕ್ರಮದಲ್ಲಿ ಜೈಕಾರ ಹಾಕಿರುವುದು ಸಾಮಾನ್ಯ. ಅದನ್ನೇ ಇಟ್ಟುಕೊಂಡು ಏನೋ ಬದಲಾವಣೆಯಾಗುತ್ತದೆ ಎಂದು ಹೇಳುವುದು ಸರಿಯಲ್ಲ. ಡಿ.ಕೆ. ಶಿವಕುಮಾರ್‌ ವಿಚಾರದಲ್ಲಿ ನಾನೇನು ಹೇಳುವುದಕ್ಕೆ ಸಾಧ್ಯವಿಲ್ಲ.

ರಾಜಕಾರಣಿಗಳು ಸೇರಿದಾಗ ರಾಜಕಾರಣ ಮಾಡುತ್ತಾರೆ. ಉದ್ಯಮಿಗಳು ಸೇರಿದಾಗ ಉದ್ಯಮ ವಿಚಾರವನ್ನ ಚರ್ಚೆ ಮಾಡುವುದು ಸಾಮಾನ್ಯ. ನನ್ನ ಮೇಲೆ ಅಭಿಮಾನವಿಟ್ಟು, ನಮ್ಮ ಅಭಿಮಾನಿಗಳು ಘೋಷಣೆ ಕೂಗುವುದು ಸಾಮಾನ್ಯ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ” ಎಂದರು.