ಉತ್ತರ ಕರ್ನಾಟಕ ಸುದ್ದಿಜಾಲ ಶಿವಮೊಗ್ಗ :
ಕೇವಲ 10 ರೂ. ಕೊಟ್ಟು ಖರೀದಿಸಿದ್ದ ಕೋಳಿ ಮರಿಗೆ ಬರೋಬ್ಬರಿ 52 ರೂ. ಬಸ್ ಚಾರ್ಜ್ ನೀಡಿದ ಘಟನೆಯೊಂದು ಹೊಸನಗರದಲ್ಲಿ ನಡೆದಿದೆ.
ಶಿವಮೊಗ್ಗದಿಂದ ಬೈಂದೂರಿನ ಶಿರೂರಿಗೆ ಹೊರಟಿದ್ದ ಅಲೆಮಾರಿ ಕುಟುಂಬವೊಂದು ಸರ್ಕಾರಿ ಬಸ್ ಹತ್ತಿದೆ. ಈ ವೇಳೆ ಬಸ್‌ನ ಕಂಡಕ್ಟರ್ ಬಂದು ಎಲ್ಲಿಗೆ ? ಎಂದು ಕೇಳಿದಾಗ ಶಿರೂರು ಹೋಗಬೇಕು ಮೂರು ಟಿಕೆಟ್ ಕೊಡ್ರಿ ಎಂದು ಹೇಳಿದಾಗ ಅದೇ ವೇಳೆ ಪುಟ್ಟ ಚೀಲದಿಂದ ಚಿವ್… ಚಿವ್.. ಎಂದು ಶಬ್ಧ ಬರುತ್ತಿದ್ದನ್ನು ಆಲಿಸಿದ ಬಸ್ ಕಂಡಕ್ಟರ್ ಅದು ಏನು? ಎಂದು ಪ್ರಶ್ನಿಸಿದ್ದಾನೆ.
ಅದು ಒಂದು ಕೋಳಿ ಮರೀರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕೂಡಲೇ ಕಂಡಕ್ಟರ್ ಅದಕ್ಕೂ ಟಿಕೆಟ್ ಮಾಡಬೇಕು. ಅದಕ್ಕೂ ರೂಲ್ಸ್ ಇದೆ ಎಂದು ಅರ್ಧ ಚಾರ್ಜ್, ಬರೋಬ್ಬರಿ 52 ರೂ. ಮಾಡಿ ಟಿಕೆಟ್ ಕೊಟ್ಟಿದ್ದಾರೆ. ಮುಖಮುಖ ನೋಡಿಕೊಂಡ ಆ ಮೂವರು ಬೇರೆದಾರಿ ಕಾಣದೆ ಟಿಕೆಟ್ ತೆಗೆದುಕೊಂಡಿದ್ದಾರೆ. ಶಿರಸಿ ಸಿದ್ದಾಪುರದಿಂದ ಬಂದ ಆ ಕುಟುಂಬದವರು ರೂ.10 ಕೊಟ್ಟು ಕೋಳಿ ಮರಿ ತಂದಿದ್ದರು. ಬಸ್‌ನ ಟಿಕೆಟ್ ದರ ನೋಡಿ ಮೂಗಿಗಿಂತ ಮೂಗುತಿ ಭಾರ ಅಂದಂಗಾಯ್ತು ಎಂದು ಗೊಣಗಿಕೊಂಡಿದ್ದು ವಿಡಿಯೋ ಈಗ ವೈರಲ್ ಆಗಿದೆ.