ಉ.ಕ ಸುದ್ದಿಜಾಲ ಬೆಂಗಳೂರು :

ನಾನು ಕಾಂಗ್ರೆಸ್ ಬಿಟ್ಟು ಹೋಗೋದಿಲ್ಲ. ನನ್ನ ನಿಲುವು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಶೆಟ್ಟರ್ ಬಿಜೆಪಿಗೆ ವಾಪಸಾದ ವಿಚಾರವಾಗಿ ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಇದನ್ನು ಎಷ್ಟು ಬಾರಿ ಹೇಳಲಿ. ಬಿಜೆಪಿಯವರಿಗೆ ನಮ್ಮ ಅನಿವಾರ್ಯತೆ ಇದೆ. ಹಾಗಾಗಿ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ.ಗೊಂದಲ ಮೂಡಿಸುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

ನಾನು, ಜಗದೀಶ್ ಶೆಟ್ಟರ್ ಒಟ್ಟಿಗೆ ನಿರ್ಧಾರ ಮಾಡಿ ಕಾಂಗ್ರೆಸ್​ಗೆ ಬಂದಿರಲಿಲ್ಲ. ನಾನು ಮೊದಲು ಕಾಂಗ್ರೆಸ್​ಗೆ ಬಂದೆ. ಟಿಕೆಟ್ ಸಿಗದ ಕಾರಣ ನಂತರ ಶೆಟ್ಟರ್​ ಬಂದರು. ಈಗ ಯಾಕೆ ಬಿಜೆಪಿಗೆ ಹೋಗಿದ್ದಾರೆ ಅಂತ ಗೊತ್ತಿಲ್ಲ. ನಾನು ಅವರು ಸ್ನೇಹಿತರು. ದಿನ ನಾವಿ‌ಬ್ಬರು ಪರಸ್ಪರ ಮಾತನ್ನಾಡುತ್ತೇವೆ.

ಆದರೆ ಅವರು ಈ ನಿರ್ಧಾರ ಮಾಡ್ತಾರೆ ಅಂತ ಗೊತ್ತಿರಲಿಲ್ಲ. ಲೋಕಸಭೆ ಚುನಾವಣೆ ಹಿನ್ನೆಲೆ ಅವರಿಗೆ ನಮ್ಮ ಅನಿವಾರ್ಯತೆ ಇದೆ. ಹಾಗಾಗಿ ಸಂಪರ್ಕ ಮಾಡ್ತಾ ಇದ್ದಾರೆ ಎಂದರು. ಸಚಿವ ಸ್ಥಾನ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಅದರ ಬಗ್ಗೆ ಈಗ ಮಾತನಾಡೋದು ಸೂಕ್ತ ಅಲ್ಲ. ಪಕ್ಷ ಏನು ಹೇಳುತ್ತೋ ಅದನ್ನು ಮಾಡುತ್ತೇನೆ ಎಂದು ತಿಳಿಸಿದರು.

ನಿನ್ನೆ ಸಿಎಂ ಭೇಟಿ ವಿಚಾರವಾಗಿ ಮಾತನಾಡಿ, ಕ್ಷೇತ್ರದ ಅನುದಾನ ವಿಚಾರಕ್ಕೆ ಭೇಟಿಯಾಗಿದ್ದೆ. ಕೃಷಿ ಕಾಲೇಜಿನ ಬಗ್ಗೆ ಬಜೆಟ್​ನಲ್ಲಿ ಅನುದಾನ ಬಿಡುಗಡೆ ಸಂಬಂಧ ಚರ್ಚಿಸಲು ಹೋಗಿದ್ದೆ‌. ಬೇರೆ ರಾಜಕೀಯ ಚರ್ಚೆ ಇಲ್ಲ. ದೆಹಲಿಗೆ ಹೋಗುವುದಾದರೆ ಹೇಳಿಯೇ ಹೋಗುತ್ತೇನೆ ಎಂದರು.

ಸವದಿ – ಡಿಕೆಶಿ ಭೇಟಿ : 

ಇತ್ತ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಲಕ್ಷ್ಮಣ್ ಸವದಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದರು. ಬಿಜೆಪಿ ಲಕ್ಷ್ಮಣ್ ಸವದಿಯನ್ನೂ ಸಂಪರ್ಕಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಜಗದೀಶ್ ಶೆಟ್ಟರ್ ಪಕ್ಷ ತೊರೆದಿರುವುದು ಕಾಂಗ್ರೆಸ್​ಗೆ ಆಘಾತ ತಂದಿದೆ. ಈ ಹಿನ್ನೆಲೆ ಲಕ್ಷ್ಮಣ್ ಸವದಿಗೆ ಬುಲಾವ್ ನೀಡಿದ ಡಿಕೆಶಿ ಸದಾಶಿವನಗರದ ತಮ್ಮ ನಿವಾಸದ ಬಳಿ ಭೇಟಿ ಮಾಡಿ ಚರ್ಚೆ ನಡೆಸಿದರು.

ಕಳೆದ ವರ್ಷ ಲಕ್ಷ್ಮಣ್ ಸವದಿ ಕಾಂಗ್ರೆಸ್​ ಸೇರ್ಪಡೆಯಾಗಿದ್ದರು. ಅಥಣಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸವದಿ ಬದಲು ಮಹೇಶ್ ಕುಮಟಳ್ಳಿಗೆ ಬಿಜೆಪಿ ಪಕ್ಷ ಆದ್ಯತೆ ನೀಡಿದ್ದರಿಂದ ಬೇಸರಗೊಂಡು ಪಕ್ಷ ತೊರೆದಿದ್ದರು.