ಉ.ಕ ಸುದ್ದಿಜಾಲ ಬೆಂಗಳೂರು :

ನಾ ನಾಯಕಿಯಂತಹ ಕಾಂಗ್ರೆಸ್ ಕಾರ್ಯಕ್ರಮಗಳ ಪೊಳ್ಳು ಭರವಸೆಗಳಿಗೆ ಮರುಳಾಗುವಷ್ಟು ದಡ್ಡರಲ್ಲ, ನಮ್ಮ ರಾಜ್ಯದ ಮಹಿಳಾ ಮತದಾರರು ಬಹಳಷ್ಟು ಬುದ್ದಿವಂತರಿದ್ದಾರೆ ಎಂದು ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ, ಹಜ್‌ ಮತ್ತು ವಕ್ಪ್‌ ಸಚಿವರಾದ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ನೀಡಿರುವ ಅವರು, ಪ್ರಿಯಾಂಕ ಗಾಂಧಿ ಅವರ ನಾ ನಾಯಕಿ ಕಾರ್ಯಕ್ರಮದ ರೀತಿಯ ಗಿಮಿಕ್‍ಗಳನ್ನು ಕಾಂಗ್ರೆಸ್ ಕಾಲಕಾಲಕ್ಕೆ ಮಾಡುತ್ತಲೇ ಬಂದಿದೆ. ಕೆಲವು ತಿಂಗಳ ಹಿಂದೆ ಉತ್ತರಪ್ರದೇಶದಲ್ಲಿ ‘ಮೈ ಲಡ್ಕಿ ಹೂಂ ಮೈ ಲಡ್ ಸಕ್ತಿ ಹೂಂ’ ಎಂದು ಘೋಷಣೆ ಹಾಕಿದ್ದರು.

ಬಳಿಕ ಇಡೀ ರಾಜ್ಯದಲ್ಲಿ 380ಕ್ಕೂ ಹೆಚ್ಚು ಸೀಟುಗಳಲ್ಲಿ ಠೇವಣಿ ಕಳಕೊಂಡಿದ್ದನ್ನ ನಾವು ಸ್ಮರಿಸಬಹುದು. ತಮ್ಮ ಅಧಿಕಾರದ ಅವಧಿಯಲ್ಲಿ ಮಹಿಳೆಯರನ್ನ ಮೂಲೆಗುಂಪಾಗಿಸಿದ್ದು ನಮ್ಮ ರಾಜ್ಯದ ಜನರಿಗೆ ಸರಿಯಾಗಿಯೇ ನೆನಪಿದೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಹಿಳಾ ಮತದಾರರು ಕಾಂಗ್ರೆಸ್‌ ಗೆ ನೆನೆಪಾಗಿದ್ದಾರೆ. ಕೇವಲ ಮತಕ್ಕಾಗಿ, ಅಧಿಕಾರದ ದಾಹಕ್ಕಾಗಿ ಹೊಸ ಘೋಷಣೆಗಳೊಂದಿಗೆ ಕಾಂಗ್ರೆಸ್‌ ಜನರ ಮುಂದೆ ಹೋಗುತ್ತಿದೆ ಎಂದಿದ್ದಾರೆ.

ನಮ್ಮ ರಾಜ್ಯದ ಮತದಾರರು ಅದರಲ್ಲೂ ಮಹಿಳಾ ಮತದಾರರು ಬಹಳಷ್ಟು ಬುದ್ದಿವಂತರಿದ್ದಾರೆ. ಇಂತಹ ಪೊಳ್ಳು ಭರವಸೆಗಳಿಗೆ ಸೊಪ್ಪು ಹಾಕುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಡಬಲ್‌ ಇಂಜಿನ್‌ ಸರಕಾರ ಮಹಿಳೆಯರ ಸರ್ವತೋಮುಖ ಅಭಿವೃದ್ದಿಗೆ ಹಲವಾರು ಕಾರ್ಯಕ್ರಮಗಳನ್ನ ನೀಡುತ್ತಿದೆ.

ಮಹಿಳೆಯರ ಸಬಲೀಕರಣ ಮತ್ತು ಕ್ಷೇಮಾಭಿವೃದ್ದಿಗಾಗಿ ಆಯವ್ಯಯದಲ್ಲಿ 43,188 ಅನುದಾನ ನೀಡಲಾಗಿದೆ. ಅಲ್ಲದೇ, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಕೋವಿಡ್‌ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳ ಮನೆ ವೆಚ್ಚ ನಿರ್ವಹಣೆಗಾಗಿ, ಮನೆಯ ಮುಖ್ಯಸ್ಥೆಯಾದ ಮಹಿಳೆಯರಿಗೆ ಸಹಾಯಧನ ನೀಡುವ ವಿಶೇಷ ಯೋಜನೆಯನ್ನು ಜಾರಿಗೆ ತರಲು ಯೋಜಿಸಲಾಗಿದೆ. ಈ ಕಾರ್ಯಕ್ರಮಗಳೇ ನಮಗೆ ಶ್ರೀರಕ್ಷೆಯಾಗಲಿವೆ ಎಂದು ಹೇಳಿದ್ದಾರೆ.