ಉ.ಕ ಸುದ್ದಿಜಾಲ ಬೆಳಗಾವಿ :
1995ರ ನಂತರ ಪ್ರಾರಂಭವಾದ ಖಾಸಗಿ ಅನುದಾನ ರಹಿತ ಶಾಲಾ-ಕಾಲೇಜುಗಳಲ್ಲಿ ವೇತನ ಅನುದಾನ ಇಲ್ಲದೆ ಕಳೆದ 29 ವರ್ಷಗಳಿಂದ ಉಪನ್ಯಾಸಕರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಯವರು ಸೇವೆ ಸಲ್ಲಿಸುತ್ತಿದ್ದಾರೆ.
ಸರ್ಕಾರದ ವೇತನವಿಲ್ಲದೆ ಅವರ ಜೀವನ ಶೋಚನೀಯವಾಗಿದೆ. ಎಂದು ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಡಿ.ಬಿ.ನದಾಫ ಹೇಳಿದರು.
ಹಿಂದಿನ ಸರ್ಕಾರ ಹಾಗೂ ಈಗಿನ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ, ಮಾನ್ಯ ಶಿಕ್ಷಣ ಸಚಿವರಿಗೆ ಹಾಗೂ ವಿವಿಧ ಇಲಾಖೆಗಳ ಸಚಿವರಿಗೂ, ವಿಧಾನಸಭೆ ಸದಸ್ಯರಿಗೆ, ವಿಧಾನ ಪರಿಷತ್ ಸದಸ್ಯರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೂ ಹಲವಾರು ಬಾರಿ ನಮ್ಮ ಮನವಿ ಸಲ್ಲಿಸಲಾಗಿದೆ.
ಬೆಂಗಳೂರು ಹಾಗೂ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲು ಹಲವಾರು ಬಾರಿ ಉಪವಾಸ ಸತ್ಯಾಗ್ರಹ ಮತ್ತು ಧರಣಿ ಸತ್ಯಾಗ್ರಹಗಳನ್ನು ಮಾಡಿದರೂ ಸಹ ಇನ್ನುವರೆಗೆ ನಮ್ಮ ಬೇಡಿಕೆ ಈಡೇರಿಲ್ಲ.
ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ನಾವುಗಳು ಬೆಂಗಳೂರಿನ ಫ್ರೀಡಂ ಪಾರ್ಕದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡುತ್ತಿದ್ದಾಗ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ನಮ್ಮ ಪ್ರತಿಭಟನಾ ಸ್ಥಳಕ್ಕೆ ಬಂದು, ನಮ್ಮ ಸರ್ಕಾರ ಈಗ ಅಧಿಕಾರದಲ್ಲಿ ಇಲ್ಲ.
ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ನಿಮ್ಮ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ವೇತನ ಅನುದಾನ ನೀಡುತ್ತೇವೆ. ಎಂದು ಭರವಸೆ ನೀಡಿದ್ದರು ಅದರ ವಿಡಿಯೋ ಚಿತ್ರೀಕರಣ ಸಹ ನಮ್ಮ ಬಳಿ ಇದೆ ಎಂದರು.
ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 2012 ಕ್ಕಿಂತ ಮೊದಲು ಪ್ರಾರಂಭವಾದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವೇತನ ಅನುದಾನ ಒದಗಿಸುವ ಭರವಸೆಯನ್ನು ನೀಡಿದ್ದಾರೆ.
ಈಗ ಬಹಳಷ್ಟು ಉಪನ್ಯಾಸಕರು, ಶಿಕ್ಷಕರು, ಮತ್ತು ಶಿಕ್ಷಕೇತರ ಸಿಬ್ಬಂದಿಯವರು ಸೇವಾ ವಯೋಮಿತಿ ಮೀರಿ ನಿವೃತ್ತಿ ಅಂಚಿನಲ್ಲಿದ್ದಾರೆ. ಆದ್ದರಿಂದ ಸರ್ಕಾರವು ಶೀಘ್ರವಾಗಿ ವೇತನ ಅನುದಾನಕ್ಕೆ ಒಳಪಡಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಆದ್ದರಿಂದ ಬುಧವಾರ ದಿನಾಂಕ 11-12-2024 ರಂದು ಬೆಳಿಗ್ಗೆ 10-00 ಗಂಟೆಯಿಂದ ಸರ್ಕಾರದ ಗಮನ ಸೆಳೆದು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ಸೌಧದ ಬಳಿ ಬೃಹತ್ ಧರಣಿ ಸತ್ಯಾಗ್ರಹ ಮಾಡಲು ತೀರ್ಮಾನಿಸಲಾಗಿದೆ.
ಕಾರಣ ಎಲ್ಲ ಆಡಳಿತ ಮಂಡಳಿಯವರು, ಉಪನ್ಯಾಸಕರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಯವರು ಕುಟುಂಬ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಆಗಮಿಸಬೇಕೆಂದು, ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಡಿ. ಬಿ. ನದಾಫ್ ಪತ್ರಿಕಾಗೋಷ್ಠಿಯಲ್ಲಿ ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಿರಣ್ ಗುರವ, ಡಾ. ಮಹೇಶ್ ಕಾಪಸಿ, ಅಪ್ಪಾಸಾಬ ನಡುವಿನಮನಿ, ಡಿ.ಡಿ.ಮೇಕನಮರಡಿ, ಎಸ್. ಎಲ್. ಜಾಧವ, ವೆಂಕಟೇಶ್ ಬನ್ನಿಕೊಪ್ಪ, ಈಶ್ವರ್ ಬಿರಾದರ್ ಪಿ.ಬಿ. ಗುಡೋಡಗಿ, ಆರ್.ಎಂ. ಸನದಿ, ಕೆ.ಬಿ.ಜಾಲವಾದಿ ಹಾಗೂ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.