ಉ.ಕ ಸುದ್ದಿಜಾಲ ಬೆಳಗಾವಿ :

ಕಿತ್ತೂರು ಉತ್ಸವವನ್ನು ಪ್ರತಿ ವರ್ಷದಂತೆ ರಾಜ್ಯ ಮಟ್ಟದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು. ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ವಿವಿಧ ಕಲಾವಿದರು ಭಾಗವಹಿಸಲಿದ್ದು, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಈ ಬಾರಿ ಕಿತ್ತೂರು ಉತ್ಸವಕ್ಕೆ ಮೆರಗು ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಬೆಳಗಾವಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಅ.20) ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿತ್ತೂರು ಉತ್ಸವ ಆಚರಣೆಯ ಸಕಲ ಸಿದ್ಧತೆ ಹಾಗೂ ವಿವಿಧ ಕಾರ್ಯಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು.

ಮೈಸೂರು ದಸರಾ ಮಾದರಿಯಲ್ಲಿ ಉತ್ಸವ ಆಚರಣೆ ತಯಾರಿ ಮಾಡಿಕೊಳ್ಳಲಾಗಿದ್ದು,ರಾಜ್ಯಾದ್ಯಂತ ಸಂಚರಿಸಿದ ವೀರ ಜ್ಯೋತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ವಿಧಾನಸೌಧದ ಆವರಣದಲ್ಲಿ ಅಕ್ಟೋಬರ್ 13 ರಂದು ಚಾಲನೆ ನೀಡಿದ್ದಾರೆ.

ಪ್ರತಿ ವರ್ಷದಂತೆ ಕಿತ್ತೂರು ಕೋಟೆ ಆವರಣದಲ್ಲಿ
ಅಕ್ಟೋಬರ್ 23 ರಿಂದ 25 ರವರೆಗೆ ವಿವಿಧ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಕಿತ್ತೂರು ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.

ಸರ್ಕಾರ ಈಗಾಗಲೇ ಉತ್ಸವಕ್ಕೆ 2 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಯಾವುದೇ ರೀತಿಯಲ್ಲಿ ಅನುದಾನದ ಕೊರತೆಯಾಗಿಲ್ಲ. ಕ್ರೀಡೆ, ಮನೋರಂಜನೆ, ವಿಚಾರ ಸಂಕೀರ್ಣ, ಫಲ ಪುಷ್ಪ ಪ್ರದರ್ಶನ, ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಆಯೋಜನೆಗೆ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕಲಾವಿದರಿಗೆ ಆನ್ ಲೈನ್ ಪಾವತಿ

ರಾಜ್ಯ ಮಟ್ಟದ ಪ್ರಶಸ್ತಿ ವಿಜೇತರು, ಅಂತರಾಷ್ಟ್ರೀಯ ಕಲಾವಿದರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಕಳೆದ ಬಾರಿಯಂತೆ ಕಲಾವಿದರಿಗೆ ಆನ್ ಲೈನ್ ಮೂಲಕ ವೇತನ ಪಾವತಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಾಹಿತಿ ನೀಡಿದರು.

ಸ್ಥಳೀಯ ಕಲಾ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿವೆ. ಆಸನ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದೇ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದುಬಸ್ತ್ ಕೂಡ ಕಲ್ಪಿಸಲಾಗಿದೆ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಕಿತ್ತೂರು ಉತ್ಸವ-2023ರ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಲಾಯಿತು.