ಚಿಕ್ಕೋಡಿ :

1987 ರ ವಿಧಾನ ಪರಿಷತ್ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದ ಜನತಾ ಪಕ್ಷದವರೇ ಮುಖ್ಯಮಂತ್ರಿ ಅಭ್ಯರ್ಥಿ ಸಂಗಪ್ಪಗೋಳರನ್ನು ಸೋಲಿಸಿದರು. ಒಂದು ವೋಟು ಸುನಂದಾ ಪಾಟೀಲರಿಗೆ ಇನ್ನೊಂದು ಕಾಂಗ್ರೆಸ್ಸಿನ ಪ್ರಕಾಶ ಹುಕ್ಕೇರಿಗೆ ಎಂದೇ ಪ್ರಚಾರ ಮಾಡಿದರು.

1987 ರಲ್ಲಿ ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಿತು. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರಕಾರ ಅಧಿಕಾರ. ರಾಜ್ಯದ ಬಹುತೇಕ ಜಿಲ್ಲೆಗಳ ಅಂದಿನ ಜಿಲ್ಲಾ ಪರಿಷತ್ತುಗಳೂ ಸಹ ಅದೇ ಪಕ್ಷದ ಹಿಡಿತದಲ್ಲಿದ್ದವು. ಆಗ ಅಸ್ತಿತ್ವದಲ್ಲಿದ್ದ ಮಂಡಳ ಪಂಚಾಯತಗಳಲ್ಲೂ ಜನತಾ ಪಕ್ಷದವರದೆ ಮೇಲುಗೈ.
         
ಬೆಳಗಾವಿ ಜಿಲ್ಲಾ ಪರಿಷತ್ತಿನ ಮೊದಲ ಅಧ್ಯಕ್ಷರಾಗಿ ಬ್ಯಾರಿಸ್ಟರ್ ಅಮರಸಿಂಹ ಪಾಟೀಲರು ಅಧ್ಯಕ್ಷರಾಗಿದ್ದರೆ, ಶ್ರೀಮತಿ ಸುನಂದಾ ಪಾಟೀಲರು ಉಪಾಧ್ಯಕ್ಷರು. ಸುನಂದಾ ಪಾಟೀಲರು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಜಿ.ಪಂ ದಿಂದ ಆಯ್ಕೆಯಾಗಿ ಬಂದಿದ್ದರು. 1986 ರಲ್ಲಿ ನಡೆದ ಪ್ರಥಮ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಆಯ್ಕೆಗೊಂಡವರು.

1987 ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ಎರಡು ಸ್ಥಾನಗಳಿಗೆ ಚುನಾವಣೆ ಬಂತು. ಮುಖ್ಯಮಂತ್ರಿ ಹೆಗಡೆ ಅವರ ಖಾಸಾ ಶಿಷ್ಯನೆಂದೇ ಗುರುತಿಸಲ್ಪಡುತ್ತಿದ್ದ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಏಳು ನಾಮಕರಣ ಸದಸ್ಯರ ಪೈಕಿ ಒಬ್ಬರಾಗಿದ್ದ ಬಿ.ಆರ್.ಸಂಗಪ್ಪಗೋಳ ಅವರು ಚಿಕ್ಕೋಡಿ ತಾಲೂಕಿನ ಕರೋಸಿಯಿಂದ ಜಿ.ಪಂ ಗೆ ಆಯ್ಕೆಯಾಗಿ ಬಂದಿದ್ದರು.
   
ಜನತಾ ಪಕ್ಷದ ವತಿಯಿಂದ ಸಂಗಪ್ಪಗೋಳರಿಗೆ ಹಾಗೂ ಸುನಂದಾ ಪಾಟೀಲರಿಗೆ ಟಿಕೆಟ್ ನೀಡಲಾಯಿತು. ಬಲಾಢ್ಯ ಹಾಗೂ 1985 ರಲ್ಲಿ 139 ಸ್ಥಾನಗಳನ್ನು ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದ ಹೆಗಡೆ ಸರಕಾರದಲ್ಲಿ ಇವರಿಬ್ಬರೂ ಆಯ್ಕೆಯಾಗುವದು ಪಕ್ಕಾ ಎಂದೇ ಎಲ್ಲರೂ ತಿಳಿದರು. ಆದರೆ, ಪ್ರಚಾರ ಆರಂಭವಾದಾಗ ಚಿತ್ರಣವೇ ಬದಲಾಗುತ್ತ ಹೋಯಿತು.
        
ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಸಹ ಜಿಲ್ಲಾ ಪರಿಷತ್ ಸದಸ್ಯರೇ ಆಗಿದ್ದರು. ಲಿಂಗಾಯತರ ಬೆಂಬಲದಿಂದಲೇ ಅಧಿಕಾರಕ್ಕೆ ಬಂದಿದ್ದ ಹೆಗಡೆ ಸರಕಾರದ ಬೆಳಗಾವಿ ಜಿಲ್ಲಾ ನಾಯಕರೂ ಸಹ ಹಿಂದುಳಿದ ಹಣಬರ ಸಮಾಜಕ್ಕೆ ಸೇರಿದ ಸಂಗಪ್ಪಗೋಳರ ಬಂಡಾಯ ರಾಜಕೀಯವನ್ನು ಹತ್ತಿಕ್ಕಲು ಮುಂದಾದರು. ಅಲ್ಲದೇ ಸಂಗಪ್ಪಗೋಳರು ಗುರುತಿಸಿಕೊಂಡಿದ್ದ ಅಂದಿನ ಸಕ್ಕರೆ ಕೈಗಾರಿಕೆ ಸಚಿವ ದಿ.ರಾಮಭಾವೂ ಪೋತದಾರ‌ ಅವರೂ ಸಹ ಸಂಗಪ್ಪಗೋಳರ ಬೆನ್ನಿಗೆ ನಿಲ್ಲಲಿಲ್ಲ.

ಮೊದಲ ಪ್ರಾಶಸ್ತ್ಯದ ಮತವನ್ನು ಸುನಂದಾ ಪಾಟೀಲರಿಗೆ ಹಾಕಿಸಲು ಮುಂದಾದ  ಜನತಾ ಪಕ್ಷದ ನಾಯಕರು
ಎರಡನೇ ಮತವನ್ನು ಕಾಂಗ್ರೆಸ್ಸಿನ ಪ್ರಕಾಶ ಹುಕ್ಕೇರಿಗೆ ಹಾಕಿಸಿದರು. ಇವರಿಬ್ಬರೂ ಗೆದ್ದರು. ಮುಖ್ಯಮಂತ್ರಿ ಹೆಗಡೆಯವರ ಅಭ್ಯರ್ಥಿ ಸಂಗಪ್ಪಗೋಳರು ಸೋತರು. ಚುನಾವಣೆಯ ನಂತರ ಸಂಗಪ್ಪಗೋಳರನ್ನು ಕರೆಸಿಕೊಂಡ ಹೆಗಡೆ ಅವರು, ಸಂಗಪ್ಪ ನೀವು ಸೋತಿಲ್ಲ. ನಾವೇ ನಿಮ್ಮನ್ನು ಸೋಲಿಸಿದ್ದೇವೆ ಎಂದು ತೀವ್ರ ನೊಂದುಕೊಂಡು ನುಡಿದಿದ್ದರು.
           
ಇದೇ 2021 ರ ಎಪ್ರಿಲ್ ತಿಂಗಳಲ್ಲಿ ಕೊರೊನಾ ಹೆಮ್ಮಾರಿಗೆ ಸಂಗಪ್ಪಗೋಳ ತಮ್ಮ 76 ನೇ ವಯಸ್ಸಿನಲ್ಲಿ ಬಲಿಯಾದರು. ಚಿಕ್ಕೋಡಿ ಬಳಿಯ ಮಜಲಟ್ಟಿ ಗ್ರಾಮದ ಅಭಿವೃದ್ಧಿ ಮಾಡಿದ್ದು ಅವರೆ ವಡ್ರಾಳ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಜಲಟ್ಟಿ ರಾಜ್ಯದಲ್ಲಿಯೇ ಒಂದು ಆದರ್ಶ ಗ್ರಾಮ. ಅಲ್ಲಿ ಡಿಗ್ರಿ ಕಾಲೇಜುಗಳಿವೆ. ಮೆಟ್ರಿಕ್ ಪೂರ್ವ ಮತ್ತು ನಂತರದ ಹಾಸ್ಟೇಲ್ ಗಳಿವೆ. ವಿದ್ಯುತ್ ಮಗ್ಗಗಳ ಕೇಂದ್ರವಿದೆ.ಈ ಎಲ್ಲ ಬೆಳವಣಿಗೆಗೆ ಕಾರಣಿಭೂತರಾಗಿದ್ದ ಸಂಗಪ್ಪಗೋಳ ಎಂದೋ ಶಾಸಕರೊ ಮಂತ್ರಿಯೊ ಆಗಬೇಕಿತ್ತು.ಆದರೆ ಅವರ ಪ್ರಾಮಾಣಿಕ ಮತ್ತು ಹೆಗಡೆಯವರ ಮೌಲ್ಯಾಧಾರಿತ ರಾಜಕಾರಣವೇ ಅವರ ರಾಜಕೀಯ ಬೆಳವಣಿಗೆಗೆ ಮುಳುವಾಯಿತು.

ಮಾಹಿತಿ : ಅಶೋಕ ಚಂದರಗಿ
ಹಿರಿಯ ಪತ್ರಕರ್ತರು