ಉ.ಕ ಸುದ್ದಿಜಾಲ ಚಿಕ್ಕೋಡಿ :
ಗೋವುಗಳು ಚಲಿಸುವ ದೇವಾಲಯ, ಔಷಧಾಲಯ, ಚಿನ್ನದ ಗಣಿ ಇದ್ದಂತೆ. ಆದರೆ, ಇತ್ತೀಚಿನ ದಿನಗಳಲ್ಲಿ ಅನೇಕ ದೇಶಿ ಗೋ ತಳಿಗಳು ವಿನಾಶದ ಅಂಚಿಗೆ ತಲುಪುತ್ತಿದೆ.
ಅಂತಹ ತಳಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕೊನ ಸುಕ್ಷೇತ್ರ ಯಡೂರದಲ್ಲಿ ‘ಗೋ ಕೈಲಾಸ’ ಸ್ಥಾಪಿಸಲಾಗಿದ್ದು, ವಿವಿಧ ದೇಶಿ ತಳಿ ಗೋವುಗಳನ್ನು ಪಾಲನೆ ಮಾಡಲಾಗುತ್ತಿದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಯಡೂರ ಗ್ರಾಮ ವಿರುಪಾಕ್ಷಲಿಂಗ ದೇವರ ನೆಲೆವೀಡು. ಕಾಡಸಿದ್ದೇಶ್ವರ ಸ್ವಾಮೀಜಿ ತಪಗೈದ ಪುಣ್ಯಭೂಮಿ. ಇಂತಹ ಪವಿತ್ರ ಕ್ಷೇತ್ರದಲ್ಲಿ ಭಾರತೀಯ ಗೋ ಸಂತತಿಯ ಸಂರಕ್ಷಣೆ ಮತ್ತು ಸಾಮಾಜಿಕ ಬದಲಾವಣೆಗೆ ಪೂರಕವಾಗಿದೆ.
ಶ್ರೀ ಕ್ಷೇತ್ರದ ಧರ್ಮಾಧ್ಯಕ್ಷರೂ ಆದ ಶ್ರೀಶೈಲ್ ಪೀಠದ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ‘ಗೋ ಕೈಲಾಸ’ ಎಂಬ ವಿಶಿಷ್ಠ ಪರಿಕಲ್ಪನೆಯೊಂದಿಗೆ ಪಾರಂಪಾರಿಕ ಪಂಚವರ್ಣದ ದೇಶಿ ಗೋ ತಳಿಗಳ ಸಂರಕ್ಷಣೆಗೆ ಮುಂದಾಗಿದ್ದಾರೆ.
ಪ್ರಶಾಂತವಾಗಿ ಹರಿಯುವ ಕೃಷ್ಣೆಯ ತಟದಲ್ಲಿ ಗೋ ಕೈಲಾಸ ಸ್ಥಾಪಿಸಲಾಗಿದೆ. ಗಿರ್, ವೊಂಗಲ್, ಜವಾರಿ, ಖಿಲಾರಿ, ಸೈವಾಲ್, ರಾಟಿ ಸೇರಿದಂತೆ ವಿವಿಧ ದೇಶಿ ತಳಿಯ 180 ಹಸುಗಳನ್ನು ಸದ್ಯಕ್ಕೆ ಪೋಷಣೆ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.
ಒಂದು ಗೋವಿನ ಪೂಜೆಯಿಂದ 33 ಕೋಟಿ ದೇವತೆಗಳನ್ನು ಪೂಜಿಸಿದ ಫಲ ದೊರಕುತ್ತದೆ ಎಂಬ ನಂಬಿಕೆ ಭಾರತೀಯ ಸಂಸ್ಕೃತಿ ಯಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಾಲಿನ ಉತ್ಪನ್ನಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ತಳಿಯ ಹಸುಗಳನ್ನು ಸಾಕಣೆ ಮಾಡಲಾಗುತ್ತಿದೆ.
ಇಂತಹ ಸನ್ನಿವೇಶದಲ್ಲಿ ದೇಶಿ ಗೋ ತಳಿಗಳ ಮಹತ್ವ ತಿಳಿಸಲು ಗೋ ಕೈಲಾಸ ಆರಂಭಿಸಲಾಗಿದೆ. ಈ ಗೋ ಕೈಲಾಸದಲ್ಲಿ ಹಸುಗಳನ್ನು ಕಟ್ಟುವುದಿಲ್ಲ. ಕೊಟ್ಟಿಗೆಯಲ್ಲಿ ಕೂಡಿ ಹಾಕುವುದಿಲ್ಲ. ಅವು ಸ್ವಚ್ಛಂದವಾಗಿ ಓಡಾಡಿಕೊಂಡಿರುವಂತೆ ವ್ಯವಸ್ಥೆ ಮಾಡಲಾಗಿದೆ.
ಗೋ ಕೈಲಾಸದ ಮಧ್ಯದಲ್ಲಿ ಪಂಚಮುಖಿ ಪರಮೇಶ್ವರನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಐದು ಸುತ್ತುಗಳಲ್ಲಿ ಐದು ಗೋವುಗಳನ್ನು ಪೂಜಿಸಿ, ಅಂತಿಮವಾಗಿ ಪಂಚಮುಖಿ ಪರಮೇಶ್ವರನ ಪೂಜೆಗೆ ಸಾರ್ವಜನಿಕರಿಗೆ ಅವಕಾಶವಿದೆ.
ವಿರುಪಾಕ್ಷಲಿಂಗ ಮತ್ತು ಕಾಡಸಿದ್ದೇಶ್ವರ ಮಠದ ದರ್ಶನಕ್ಕಾಗಿ ಬರುವ ಭಕ್ತಾದಿಗಳಿಗೆ ಗೋ ಕೈಲಾಸ ವಿಶೇಷ ಆಕರ್ಷಣೆಯಾಗಿದೆ.