ಉ.ಕ ಸುದ್ದಿಜಾಲ ಬೆಂಗಳೂರು :

ನರೇಂದ್ರ ಮೋದಿಯವರು ಪ್ರಧಾನಿಯಾದರೆ ದೇಶ ತೊರೆಯುತ್ತೇನೆ ಎಂದು ದೇವೇಗೌಡರು ಹೇಳಿದ್ದು ಮರೆತುಹೋಯ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೇವೆಗೌಡರ ವಿರುದ್ದ ವಾಗ್ದಾಳಿ ನಡೆಸಿದರು.

ಕರ್ನಾಟಕ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಪುಟ್ಟಣ್ಣ ಜಯಗಳಿಸಿರುವ ಹಿನ್ನೆಲೆಯಲ್ಲಿ ಕಂಗೇರಿಯ ಸೂಲಿಕೇರಿ ಮೈದಾನದಲ್ಲಿ ಆಯೋಜಿಸಿರುವ  ಶಿಕ್ಷಕರ ಕೃತಜ್ಞತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮಾಜಿ ಪ್ರಧಾನಿ ದೇವೇಗೌಡರು ಈಗ ಬಿಜೆಪಿ ಜೊತೆ ಸೇರಿರುವುದು, ಮೋದಿಯವರನ್ನು ವಿಪರೀತ ಹೊಗಳುತ್ತಿರುವುದು ನನಗೆ ತುಂಬಾ ಆಶ್ಚರ್ಯ ಆಗಿದೆ. ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟಲು ಬಯಸುತ್ತೇನೆ. ಬಿಜೆಪಿಗೆ ಯಾವತ್ತೂ ವಿರುದ್ಧವಾಗಿರುತ್ತೇವೆ ಎಂದಿದ್ದರು.

ಈಗ ತಮ್ಮಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇಂದು ನಾಡಿನ ಜನತೆ ನಿಮ್ಮ ಹಾಗೆ ಪ್ರಜ್ಞಾವಂತರಾಗಿದ್ದಾರೆ. ಇವರ ಹೇಳಿಕೆಗಳನ್ನು ಪರಿಶೀಲಿಸಿ ತುಲನೆ ಮಾಡುವಷ್ಟು ತಿಳಿವಳಿಕೆ ನಾಡಿನ ಜನರಿಗೆ ಬಂದಿದೆ.  ರಾಜಕೀಯವಾಗಿ ದೇವೇಗೌಡರು ತಮ್ಮ ಕುಟುಂಬದ ಉಳಿವಿಗಾಗಿ ಯಾವುದೇ ನಿರ್ಧಾರಕ್ಕೆ ಬಂದರೂ ಜನರು ಕಣ್ಣುಮುಚ್ಚಿಕೊಂಡು ಅವರನ್ನು ಬೆಂಬಲಿಸಬೇಕು ಎನ್ನುವ  ಸಂದರ್ಭ ಈಗ ಇಲ್ಲ ಎಂದರು.

ಹಿಂದೆ ನಾನು ಜನತಾದಳ ಎಸ್ ನಲ್ಲಿದ್ದಾಗ, ಪುಟ್ಟಣ್ಣ ನವರಿಗೆ ಶಿಕ್ಷಕರು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದ್ದು, ಚುನಾವಣೆಗೆ ನಿಲ್ಲುವುದಾಗಿ ತಿಳಿಸಿದ್ದರು.  2002ರಲ್ಲಿ ಜನರ ಆಶೀರ್ವಾದದಿಂದ ಜಯಗಳಿಸಿದರು. ನಂತರ ಐದು ಬಾರಿ ಗೆದ್ದಿದ್ದಾರೆ. ಜನರ ಧ್ವನಿಯಾಗಿ ಸಮರ್ಥವಾಗಿ ಕೆಲಸ ಮಾಡಿದ್ದು, ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದರೂ ಅವರನ್ನು ಬೆಂಬಲಿಸಿದ ಶಿಕ್ಷಕ ಸಮುದಾಯದ ಪ್ರಜ್ಞಾವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿ.ಕೆ.ಸುರೇಶ್ ಗೆಲ್ಲುವ ವಿಶ್ವಾಸ ನನಗಿದೆ

ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಜನರೇ ತೀರ್ಮಾನಿಸಬೇಕು. ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್ ಅವರನ್ನು ಕಣಕ್ಕೆ 4 ಬಾರಿ ಇಳಿಸಲಾಗಿದೆ. ಈ ಕ್ಷೇತ್ರದಲ್ಲಿ ಅವರು ಖಂಡಿತ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ.  ಬಿಜೆಪಿಯವರು ನರೇಂದ್ರ ಮೋದಿಯವರ ಹೆಸರಿನಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆಯೇ ಹೊರತು ಬಿಜೆಪಿಯವರಿಗೆ ಜನರ ಬಳಿ ಹೋಗಲು ಕಾರಣಗಳೇ ಇಲ್ಲ ಎಂದರು.

ನರೇಂದ್ರ ಮೋದಿಯವರ ಹೆಸರಿನ ಮೇಲೆಯೇ ಗೆಲ್ಲುತ್ತೇವೆ  ಎನ್ನುವವರಷ್ಟು ಮೂರ್ಖರು ಯಾರೂ ಇಲ್ಲ

ನರೇಂದ್ರ ಮೋದಿಯವರ ಹೆಸರಿನ ಮೇಲೆ ಗೆಲ್ಲುತ್ತೇವೆ ಎಂದು ಬಿಜೆಪಿ ಭಾವಿಸಿದೆ. ನರೇಂದ್ರ ಮೋದಿಯವರು ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಕಿ ಪಾದಯಾತ್ರೆ ಮಾಡಿದ್ದರೂ ನಮಗೆ 136 ಸ್ಥಾನಗಳು ದೊರೆತವು. ಮೋದಿಯವರು ಪ್ರಚಾರ ಮಾಡಿದ್ದ ಯಾವ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲೇ ಇಲ್ಲ. ಹೀಗಾಗಿ ನರೇಂದ್ರ ಮೋದಿಯವರ ಹೆಸರಿನ ಮೇಲೆಯೇ ಗೆಲ್ಲುತ್ತೇವೆ  ಎನ್ನುವ ಇವರಷ್ಟು ಮೂರ್ಖರು ಯಾರೂ ಇಲ್ಲ ಎಂದು ಲೇವಡಿ ಮಾಡಿದರು.

ಗೇಯುವ ಎತ್ತಿಗೆ ಹುಲ್ಲು ಹಾಕಬೇಕು

ಕೊಟ್ಟ ಮಾತಿನಂತೆ ನಡೆದುಕೊಳ್ಳವವರು, ಕೆಲಸ ಮಾಡಿರುವವರಿಗೆ ತಾನೇ ಕೂಲಿ ಕೊಡುವುದು. ಗೇಯುವ ಎತ್ತಿಗೆ ಹುಲ್ಲು ಹಾಕಬೇಕು. ಕಳ್ಳ ಎತ್ತಿಗೆ ಹುಲ್ಲು ಹಾಕಬಾರದು ಎಂದರು. ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಅವರು 28 ಕ್ಕೆ 28 ಗೆಲ್ಲುತ್ತೇವೆ ಎಂದುಕೊಂಡಿದ್ದಾರೆ.

2023- 24 ರಲ್ಲಿ ಕರ್ನಾಟಕದಿಂದ 4.30 ಲಕ್ಷ ಕೋಟಿ  ರೂಪಾಯಿ ಈ ವರ್ಷ ತೆರಿಗೆ ಸಂಗ್ರಹಿಸಿ ನೀಡಲಾಗಿದೆ.  ಆದರೆ ನಮಗೆ 50, 257 ಕೋಟಿ ರೂ ಮಾತ್ರ ವಾಪಾಸ್ ಬಂದಿದೆ. ಇದು ಅತ್ಯಂತ ಅನ್ಯಾಯ. ಹೀಗಾದರೆ ಕರ್ನಾಟಕದ ಅಭಿವೃದ್ಧಿ ಹೇಗಾಗಬೇಕು. ತೆರಿಗೆ ಹಂಚಿಕೆಯಲ್ಲಿ ನಮಗೆ ನ್ಯಾಯ ನೀಡಬೇಕು ಎಂದು ಇಡಿ ರಾಜ್ಯದ ಜನರೇ ಪ್ರಶ್ನಿಸುತ್ತಿದ್ದಾರೆ ಎಂದರು.

ದೇವೇಗೌಡರ  ಧ್ವಂಧ್ವ ನೀತಿ

ದೇವೇಗೌಡರು ನರೇಂದ್ರ ಮೋದಿಯವರನ್ನು  ಈಗ ಹೊಗಳಿದ್ದೆ ಹೊಗಳಿದ್ದು. ನನಗೂ ಅವರಿಗೂ ಅವಿನಾಭಾವ ಸಂಬಂಧ ಇದೆ ಅಂತಲೂ ಎನ್ನುತ್ತಾರೆ. ಗೌಡರು ಹೀಗೇಕಾದರು ಎಂದು ಆಶ್ಚರ್ಯವಾಗಿದೆ. ಇದೇ ದೇವೇಗೌಡರು ನರೇಂದ್ರ ಮೋದಿಯವರು ಪುನಃ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ  ಎಂದಿದ್ದರು. ಈಗ ಹೊಗಳುತ್ತಾರೆ. ಹೀಗೆ ಧ್ವಂಧ್ವ ನೀತಿ ಅನುಸರಿಸುತ್ತಿದ್ದಾರೆ.  ಈ ದೇಶದ ಪ್ರಧಾನ ಮಂತ್ರಿಯಾಗಿದ್ದವರು ಈ ರೀತಿ ಹೇಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದರು.

ಶಿಕ್ಷಕರ ಸಮಸ್ಯೆಗಳ ಬಗ್ಗೆ  ಚರ್ಚಿಸಲು ಸಭೆ

ಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಶಿಕ್ಷಕರ ಪ್ರತಿನಿಧಿಗಳು, ಆರ್ಥಿಕ ಇಲಾಖೆಯೊಂದಿಗೆ ಕೂಡಲೇ ಸಭೆ ನಡೆಸಲಾಗುವುದು ಎಂದರು.

ರಾಮೋಜಿಗೌಡ, ಶ್ರೀನಿವಾಸ್ ಇಬ್ಬರೂ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.  ಪುಟ್ಟಣ್ಣನವರನ್ನು ಗೆಲ್ಲಿಸಿದಂತೆಯೇ ಈ ಇಬ್ಬರೂ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿ,  ಪುಟ್ಟಣ್ಣನವರ ಜಯ ಶಿಕ್ಷಕರ ಜಯ ಎಂದು ಬಣ್ಣಿಸಿದರು.