ಉ.ಕ ಸುದ್ದಿಜಾಲ ಧಾರವಾಡ :
ಹುಬ್ಬಳ್ಳಿ–ಧಾರವಾಡದಲ್ಲಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಕೇಂದ್ರ ಮತ್ತು ರಾಜ್ಯಸರ್ಕಾರದ ಅನುದಾನದೊಂದಿಗೆ ಬೃಹತ್ ಕಾರ್ಯಕ್ರಮಕ್ಕೆ ಅಗತ್ಯವಿರುವ ಆರ್ಥಿಕ ಮತ್ತು ಮಾನವ ಸಂಪನ್ಮೂಲ ಪೂರೈಸುವಲ್ಲಿ ಜಿಲ್ಲೆಯ ವಿವಿಧ ಕೈಗಾರಿಕೆ, ಕಂಪನಿ ಮತ್ತು ಸಂಘ ಸಂಸ್ಥೆಗಳು ಉದಾರತೆ ಮೆರೆದಿವೆ.
ಇದೇ ಮೊದಲ ಬಾರಿಗೆ ನಗರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಸ್ವಯಂ ಪ್ರೇರಿತವಾಗಿ ಸೇವೆ, ಪ್ರಾಯೋಜಕತ್ವ, ದೇಣಿಗೆ, ಪರಿಕರಗಳನ್ನು ನೀಡಿ ಹೃದಯ ಶ್ರೀಮಂತಿಕೆ ತೋರಿ ಸ್ವಾಭಿಮಾನ ಮೂಡಿಸಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನವರಿ 12 ರಂದು ರಾಷ್ಟ್ರೀಯ ಯುವ ಜನೋತ್ಸವವನ್ನು ಉದ್ಘಾಟಿಸಲಿದ್ದು, ಈ ವೈಭವದ ಸಮಾರಂಭದ ಯಶಸ್ಸಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಬಹುತೇಕ ಸಂಸ್ಥೆಗಳು ಒಂದೊಂದು ರೀತಿಯಲ್ಲಿ ನೆರವಾಗುತ್ತಿವೆ. ಜನರ ಸಹಭಾಗಿತ್ವದ ಕುರಿತ ಪ್ರಧಾನಮಂತ್ರಿಯವರ ಆಶಯವು ಇಲ್ಲಿ ಸಾಕಾರಗೊಳ್ಳುತ್ತಿದೆ.
ಸಾರ್ವಜನಿಕರು ಯುವಜನೋತ್ಸವವನ್ನು ಕಣ್ತುಂಬಿಕೊಳ್ಳಲು ಜಿಲ್ಲಾಡಳಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಈ ಸಾರಿಗೆ ಬಸ್ ಹಾಗೂ ಜಿಲ್ಲಾಡಳಿತದ ಆಯ್ದ ವಾಹನಗಳಿಗೆ ಭಾರತೀಯ ತೈಲ ನಿಗಮ ಉಚಿತವಾಗಿ ಡೀಸೆಲ್ ಪೂರೈಸುತ್ತಿದೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಶೇಷತೆ, ರಾಷ್ಟ್ರದ ವೈವಿಧ್ಯತೆ ಮತ್ತು ಏಕತೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ತಪ್ಪದೇ ವೀಕ್ಷಿಸಲು ಅನುಕೂಲ ಮಾಡಿಕೊಟ್ಟಿದೆ. ಈ ಮೂಲಕ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಮಹತ್ಕಾರ್ಯಕ್ಕೆ ಕೈ ಜೋಡಿಸಿದೆ.
ಸುಮಾರು 7,500 ಪ್ರತಿನಿಧಿಗಳಿಗೆ ಉಚಿತವಾಗಿ ಮಿಶ್ರಾಪೇಡೆ ವಿತರಿಸಲು ಧಾರವಾಡ ಸಜ್ಜು :
ಧಾರವಾಡ ಎಂದಾಕ್ಷಣ ಧಾರವಾಡ ಪೇಡೆ ನೆನಪಿಗೆ ಬರುವುದು ಸಹಜ. ಬಾಯಲ್ಲಿ ನೀರೂರಿಸುವ, ಒಮ್ಮೆ ಸವಿದರೆ ಜೀವನ ಪಯರ್‍ಂತ ನೆನಪಿನಲ್ಲಿ ಉಳಿಯುವ ಪೇಡೆ ನೀಡುವ ಮೂಲಕ ರಾಷ್ಟ್ರೀಯ ಉತ್ಸವವನ್ನು ಸ್ಮರಣೀಯವಾಗಿಸಲು ಜಿಲ್ಲಾಡಳಿತ ಮುಂದಾಗಿದೆ. ಧಾರವಾಡದ ಪ್ರಸಿದ್ಧ ಮಿಶ್ರಾಪೇಡಾ ಉದ್ಯಮದವರು, ದೇಶದ ಎಲ್ಲ ಭಾಗಗಳಿಂದ ಆಗಮಿಸುತ್ತಿರುವ ಸುಮಾರು 7,500 ಪ್ರತಿನಿಧಿಗಳಿಗೆ ಉಚಿತವಾಗಿ ಮಿಶ್ರಾಪೇಡೆ ವಿತರಿಸಲು ಸಜ್ಜಾಗಿದೆ. ಈಗಾಗಲೇ ಬಹುತೇಕ ಪ್ಯಾಕಿಂಗ್ ಪೂರ್ಣಗೊಳಿಸಿದ್ದು, ಪೇಡೆಯ ಸ್ವಾದ ಸವಿಯಲು ಮತ್ತು ಈ ಮೂಲಕ ಧಾರವಾಡದ ನೆನಪುಗಳನ್ನು ದೇಶಾದ್ಯಂತ ಪಸರಿಸಲು ಮುಂದಾಗಿದೆ.
ಯುವ ಜನೋತ್ಸವ ಸ್ವಚ್ಛ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿದ್ದು, ಏಕ ಬಳಕೆ ಪ್ಲಾಸ್ಟಿಕ್ ನಿಭರ್ಂಧಿಸಿರುವುದರಿಂದ ಪ್ರತಿನಿಧಿಗಳಿಗೆ ಮರಬಳಕೆಯ ಸ್ಟೀಲ್‍ನ ಕುಡಿಯುವ ನೀರಿನ ಬಾಟಲ್‍ಗಳನ್ನು ಪೂರೈಸಲಾಗುತ್ತಿದೆ. ಇದಕ್ಕೆ ಕೆನರಾ ಬ್ಯಾಂಕ್ ಮತ್ತು ಟಾಟಾ ಹಿಟಾಚಿ ಸಂಸ್ಥೆ ತಲಾ ಎರಡು ಸಾವಿರ ಬಾಟಲ್ ಗಳನ್ನು ಮತ್ತು ಹುಬ್ಬಳ್ಳಿ ಧಾರವಾಡ ವೈನ್ ಅಸೋಸಿಯೇಷನ್‍ದಿಂದ 10 ಲಕ್ಷ ಕುಡಿಯುವ ನೀರಿನ ಬಾಟಲ್‍ಗಳ ಕೊಡುಗೆಯಾಗಿ ನೀಡುವ ಮೂಲಕ ಜಿಲ್ಲಾಡಳಿತಕ್ಕೆ ಕೈಜೋಡಿಸುತ್ತಿವೆ.
ವರ್ಣರಂಜಿತ ಉತ್ಸವಕ್ಕೆ ಹೆಸ್ಕಾಂ ಉಚಿತವಾಗಿ ವಿಶೇಷ ದೀಪಾಲಂಕಾರ ಮಾಡುತ್ತಿದೆ. ಸರ್ಕಾರದ ಕ್ರೆಡೆಲ್ ಸಂಸ್ಥೆ ಆರ್ಥಿಕ ಸಹಾಯ ಮಾಡಿದರೆ, ಸರ್ಕಾರೇತರ ಸಂಸ್ಥೆ ಕ್ರಡಾಯಿಯು ಪ್ರತಿನಿಧಿಗಳಿಗೆ ಸ್ವಾಗತ ಕಿಟ್‍ಗಳನ್ನು ಒದಗಿಸಿದೆ.
ಹುಬ್ಬಳ್ಳಿ-ಧಾರವಾಡ ಹೋಟೆಲ್ ಅಸೋಸಿಯೇಷನ್ ಯುಜನೋತ್ಸವದ ಪ್ರತಿನಿಧಿಗಳಿಗೆ ರಿಯಾಯಿತಿ ದರದಲ್ಲಿ ಕೊಠಡಿಗಳನ್ನು ಒದಗಿಸಿದ್ದು, ಚೇಂಬರ್ ಆಫ್ ಕಾಮರ್ಸ್‍ದಿಂದ ಯುವ ಪ್ರತಿನಿಧಿಗಳು ವಾಸಿಸುತ್ತಿರುವ ಹಾಸ್ಟೆಲ್‍ಗಳಿಗೆ ಒಂದು ಸಾವಿರ ಬಕೆಟ್‍ಗಳನ್ನು ನೀಡಿದೆ. ಧಾರವಾಡದ ಅಕ್ವೇಸ್ ಪ್ರೈವೆಟ್ ಲಿಮಿಟೆಡ್ ಸ್ಮರಣಿಕೆಗಳನ್ನು, ಯುಫ್ಲೆಕ್ಸ್ ಲಿಮಿಟೆಡ್ 5,000 ಯೋಗ ಮ್ಯಾಟ್‍ಗಳನ್ನು ಪೂರೈಸಿದೆ.
ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ, ಕೆ.ಎಂ.ಎಫ್, ಟಾಟಾ ಮೋಟರ್ಸ್, ಯುನಿಬೆಕ್ಸ್, ಯೂನಿಯನ್ ಬ್ಯಾಂಕ್, ಧಾರವಾಡ ಜಿಲ್ಲಾ ಕ್ರಷರ್ ಮಾಲೀಕರ ಸಂಘ ಮತ್ತು ಮಹೀಂದ್ರ ಸಂಸ್ಥೆ ಉದಾರವಾಗಿ ಧನ ಸಹಾಯ ಮಾಡಿವೆ.
ರಾಷ್ಟ್ರೀಯ ಯುವಜನೋತ್ಸವವನ್ನು ಅವಳಿ ನಗರದಲ್ಲಿ ಅದ್ಧೂರಿಯಾಗಿ ಸಂಘಟಿಸಿ, ಯಶಸ್ವಿಯಾಗಿಸಲು ಜಿಲ್ಲಾಡಳಿತಕ್ಕೆ ನೆರವು ನೀಡಿದ ಎಲ್ಲ ಸರ್ಕಾರೇತರ ಸಂಘ ಸಂಸ್ಥೆಗಳಿಗೆ, ಉದ್ಯಮಿಗಳಿಗೆ ಮತ್ತು ಸಕ್ರೀಯವಾಗಿ ಪಾಲ್ಗೊಂಡಿರುವ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳನ್ನು ಜಿಲ್ಲಾಡಳಿತ ಕೃತಜ್ಞತೆಯಿಂದ ಸ್ಮರಿಸಿದೆ.