ಉ.ಕ ಸುದ್ದಿಜಾಲ ಹುಬ್ಬಳ್ಳಿ :
ಕರ್ತವ್ಯ ನಿರತ ಪತ್ರಕರ್ತನ ಮೇಲೆ ಪೋಲಿಸ್ ಇನ್ಸಪೆಕ್ಟರ್ ದರ್ಪ ಮೆರೆದ ಘಟನೆ ಕಲಘಟಗಿ ಪಟ್ಟಣದಲ್ಲಿ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಪತ್ರಕರ್ತರು ಮೌನ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಇನ್ಸ್‌ಪೆಕ್ಟರ್ ಎಸ್ ಎಸ್ ಕೌಜಲಗಿ ಪತ್ರಕರ್ತರ ಮುಂದೆ ಕ್ಷಮೆಯಾಚನೆ ಮಾಡಿದ್ದಾರೆ.
ಹುಬ್ಬಳ್ಳಿ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿಂದು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ವರದಿಗೆ ಖಾಸಗಿ ವಾಹಿನಿಯ ಪತ್ರಕರ್ತರು ತೆರಳಿದ್ದರು. ಈ ವೇಳೆ ಏಕಾಏಕಿ ಮಳೆ ಬಂದ ಹಿನ್ನೆಲೆಯಲ್ಲಿ ಜನರು ವಾಹನಗಳತ್ತ ಮುಖ ಮಾಡಿದ್ದರು.
ಈ ವೇಳೆ ಜನರ ವಿಡಿಯೋ ಮಾಡುತ್ತಿದ್ದ ಪತ್ರಕರ್ತರ ಮೇಲೆ ಏಕಾಏಕಿ ಕಲಘಟಗಿ ಪೋಲಿಸ್ ಠಾಣೆಯ ಸಿಪಿಐ ಎಸ್.ಎಸ್.ಕೌಜಲಗಿ ಅವರು ಅವಾಚ್ಯವಾಗಿ ನಿಂದಿಸಿದ್ದಾರೆ.
ಈ ಘಟನೆಯಿಂದ ಬೇಸರಗೊಂಡ ಪತ್ರಕರ್ತರು ಠಾಣೆ ಮುಂದೆ ಮೌನ ಪ್ರತಿಭಟನೆ ನಡೆಸಿದರು. ಇದೇ ವೇಳೆ ಪೊಲೀಸ್ ಅಧಿಕಾರಿಗಳು ಪತ್ರಕರ್ತರ ಮನವೊಲಿಸಲು ಮುಂದಾಗಿದ್ದು, ಸಿಪಿಐ ಎಸ್.ಎಸ್.ಕೌಜಲಗಿ ಪತ್ರಕರ್ತರ ಮುಂದೆ ಕ್ಷಮೆ ಕೇಳಿದ್ದಾರೆ.
ಇನ್ನೂ ಈ ಘಟನೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರು ತೀವ್ರವಾಗಿ ಖಂಡಿಸಿದ್ದಾರೆ. ಪೋಲಿಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದು, ಪೊಲೀಸ್ ಅಧಿಕಾರಿಗಳು ಸಿಪಿಐ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಭರವಸೆಯನ್ನು ನೀಡಿದ್ದಾರೆ.