ಉ.ಕ ಸುದ್ದಿಜಾಲ ಕಾಗವಾಡ :
ಕೇವಲ 95 ದಿನಗಳ ಖಿಲ್ಲಾರಿ ತಳಿಯ ಕರು ಬರೋಬ್ಬರಿ 1.5 ಲಕ್ಷಕ್ಕೆ ಮಾರಾಟವಾಗಿ ಅಚ್ಚರಿ ಮೂಡಿಸಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣ ಕಿತ್ತೂರು ಗ್ರಾಮದ ರೈತ ಅಶೋಕ ಜಂಬಗಿ ಯವರ ಮನೆಯಲ್ಲಿದ್ದ ಕಿಲ್ಲಾರಿ ಆಕಳಿಗೆ ಹುಟ್ಟಿದ ಕರು ಅಲ್ಪಾವಧಿಯಲ್ಲಿ ದುಬಾರಿ ಬೆಲೆಗೆ ಮಾರಟವಾಗಿ ಗಮನ ಸೆಳೆದಿದೆ.
ರಾಯಭಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ರೈತ ಕರೆಪ್ಪ ಲಾಳಿ 1.5 ಲಕ್ಷ ಹಣ ಕೊಟ್ಟು ಖರೀದಿಸಿ.ಕರುವಿಗೆ ಬಣ್ಣ ಬಳಿದು ಅದ್ದೂರಿ ಮೆರೆವಣಿಗೆ ಮಾಡುವ ಮೂಲಕ ಸ್ವಾಗತ ಕೋರಿದ್ದಾನೆ. ಒಟ್ಟಾರೆ ಅಳಿವಿನಂಚಿನಲ್ಲಿರುವ ಕಿಲ್ಲಾರಿ ತಳಿಗಳ ಅಭಿವೃದ್ಧಿಗೆ ಉತ್ತರ ಕರ್ನಾಟಕದ ರೈತರು ಹೆಚ್ಚಿನ ಒಲವು ತೋರಿದ್ದು ಗಮನಾರ್ಹವಾಗಿದೆ.
ಈ ಕುರಿತು ರೈತ ಅಶೋಕ ನಿಂಗಪ್ಪ ಜಂಬಗಿ ಮಾತನಾಡಿ, “ನಮ್ಮ ಅಜ್ಜ, ಮುತ್ತಜ್ಜನ ಕಾಲದಿಂದಲೂ ಕಿಲಾರಿ ಜಾತಿ ಹೋರಿಗಳನ್ನು ಸಾಕುತ್ತಾ ಬರಲಾಗಿದೆ. ಕಿಲಾರಿ ತಳಿಯು ವಿಶೇಷತೆಯಿಂದ ಕೂಡಿದ್ದು, ಈ ತಳಿಯ ಹೋರಿ ಉತ್ತಮ ಬೆಲೆಗೆ ಮಾರಾಟವಾಗುತ್ತದೆ.
ಒಂದು ವರ್ಷದ ಕರು ಬರೋಬ್ಬರಿ ಐದಾರು ಲಕ್ಷ ರೂ ಬೆಲೆ ಬಾಳುತ್ತದೆ. ಸದ್ಯ ನಮ್ಮ ಬಳಿ ಜಾನುವಾರಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅವುಗಳ ಪೋಷಣೆ ಅಷ್ಟು ಸುಲಭವಲ್ಲ. ಹೀಗಾಗಿ ನಾವು ಚಿಕ್ಕ ವಯಸ್ಸಿಗೆ ಕರು ಮಾರಾಟ ಮಾಡಿದ್ದೇವೆ. ಕಡಿಮೆ ವಯಸ್ಸಿನ ಕರು ದೊಡ್ಡ ಮೊತ್ತಕ್ಕೆ ಮಾರಾಟವಾಗಿ ನಮ್ಮ ಕುಟುಂಬದ ಕೀರ್ತಿ ಹೆಚ್ಚಿಸಿದೆ” ಎಂದರು.
ಕರು ಖರೀದಿಸಿದ ರೈತ ಕರಿಯಪ್ಪ ಭರಮಪ್ಪ ಲಾಳಿ ಮಾತನಾಡಿ, “ಹಲವು ವರ್ಷಗಳಿಂದ ಒಳ್ಳೆಯ ತಳಿಯ ಕರು ಹುಡುಕಾಡುತ್ತಿದ್ದೆವು. ಸದ್ಯ ರೈತ ಅಶೋಕ ನಿಂಗಪ್ಪ ಅವರ ಮನೆಯಲ್ಲಿ ಉತ್ತಮ ಕರು ಸಿಕ್ಕಿದೆ. ನಾವು ಕಿಲಾರಿ ತಳಿ ಉಳಿಸುವ ಸಲುವಾಗಿ ಹಾಗೂ ಪ್ರದರ್ಶನ ಮತ್ತು ತಳಿ ಅಭಿವೃದ್ಧಿ ಮಾಡುವುದಕ್ಕೆ ಯೋಜಿಸಿದ್ದೇವೆ.
ಈ ಕರುವಿನ ವಿಶೇಷತೆ ಎಂದರೆ ಇದರ ತಾಯಿ ತಿಕ್ಕುಂಡಿ ಮನೆತನದ ಆಕಳು, ಕರುವಿನ ಮುಖ ತುಂಬಾ ಉದ್ದವಾಗಿದೆ. ಕೊಂಬುಗಳು ಸಣ್ಣದಾಗಿ ಬೆಳೆಯುತ್ತದೆ. ಸಂಪೂರ್ಣವಾಗಿ ಕರುವಿನ ಮೈ ತುಂಬಾ ದೃಢವಾಗಿರುತ್ತದೆ.
ಇದು ಅತಿ ಉತ್ತಮವಾದ ತಳಿ ಆಗಿರುವುದರಿಂದ ನಾವು ಖರೀದಿ ಮಾಡಿದ್ದೇವೆ. ದೇಸಿ ಗೋವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರೈತರು ಹೆಚ್ಚಾಗಿ ದೇಸಿ ಹಸುಗಳನ್ನು ಸಾಕಬೇಕು ” ಎಂದು ಮನವಿ ಮಾಡಿದರು.