ಉ‌.ಕ‌ ಸುದ್ದಿಜಾಲ ಮೈಸೂರು :

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮೇಲೆಯೂ ಎಫ್​ಐಆರ್‌ ಆಗಿದೆ. ಅವರು ರಾಜೀನಾಮೆ ನೀಡಲಿ, ಬಳಿಕ ನಾನು ನೋಡುತ್ತೇನೆ ಎಂದು ಲೋಕಾಯುಕ್ತ ಎಫ್​ಐಆರ್​ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ದಸರಾ ಬಗ್ಗೆ ಮಾತನಾಡಿದ ಸಿಎಂ, ಈ ಬಾರಿ ಅದ್ಧೂರಿ ದಸರಾ ಮಾಡಲು ಸೂಚಿಸಲಾಗಿದೆ. ಅಕ್ಟೋಬರ್‌ 3 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಹಂ.ಪಾ.ನಾಗರಾಜಯ್ಯ ದಸರಾ ಉದ್ಘಾಟನೆ ಮಾಡಲಿದ್ದಾರೆ.

ಅಂದೇ ಎಲ್ಲಾ ಸಾಂಸ್ಕೃತಿಕಾ ಕಾರ್ಯಕ್ರಮಗಳು ಅರಮನೆ ಮುಂಭಾಗದಲ್ಲಿ ಉದ್ಘಾಟನೆ ಆಗುತ್ತದೆ. ದಸರಾ ಉದ್ಘಾಟನೆಗೆ ಮೈಸೂರಿಗೆ ಬರುತ್ತೇನೆ. ಈ ಬಾರಿ ದಸರಾವನ್ನು ಅಚ್ಚುಕಟ್ಟಾಗಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಈ ಬಾರಿ ತಮಿಳುನಾಡಿಗೆ 177 ಟಿಎಂಸಿ ನೀರು ಬಿಡಬೇಕಿತ್ತು. ಆದರೆ, ಈಗಾಗಲೇ ತಮಿಳುನಾಡಿಗೆ 207 ಟಿಎಂಸಿ ನೀರು ಹರಿದಿದೆ . ನಮ್ಮ ಮತ್ತು ತಮಿಳುನಾಡು ನಡುವೆ ಯಾವುದೇ ಸಮಸ್ಯೆ ಇರಲ್ಲ ಎಂದರು.

ನಾಗಮಂಗಲ ಗಲಾಟೆ ಪೋಲೀಸರ ವೈಫಲ್ಯದಿಂದ ನಡೆಯಿತು. ಆ ರೀತಿ ಘಟನೆಗಳು ಮೈಸೂರಿನಲ್ಲಿ ಆಗದಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಕ್ಲಬ್​ಗಳಲ್ಲಿ ಡ್ರಗ್ಸ್‌ ಮತ್ತು ಗಾಂಜಾ ತಡೆಯಲು ಸೂಚಿಸಿದ್ದು, ಈ ಚಟಕ್ಕೆ ಯುವಕರು ಬಲಿಯಾಗುತ್ತಿದ್ದಾರೆ. ತಡೆಯಿರಿ ಎಂದು ಪೋಲೀಸರಿಗೆ ಸೂಚಿಸಿದ್ದೇನೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಸರ್ಕಾರಿ ಜಮಿನು ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒತ್ತುವರಿ ತೆರವು ಮಾಡಿ, ಸರ್ಕಾರಿ ಜಾಗ ಉಳಿಸಿ ಕೆರೆಗಳನ್ನು ಅಭಿವೃದ್ಧಿಪಡಿಸಿ ಎಂದು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೇಲೆ ಎಫ್ಐಆರ್ :

ಚುನಾವಣಾ ಬಾಂಡ್‌ ಮೂಲಕ ಸುಲಿಗೆ ಮಾಡಿರುವ ಆರೋಪಕ್ಕಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶ ನೀಡಿದೆ.

ಚುನಾವಣಾ ಬಾಂಡ್‌ಗಳ ಮೂಲಕ ಹೆದರಿಸಿ ಸುಲಿಗೆ ಮಾಡಲಾಗಿದೆ. ಹೀಗಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ)ನ ಆದರ್ಶ ಅಯ್ಯರ್ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.