ಉ.ಕ‌ ಸುದ್ದಿಜಾಲ ಮೈಸೂರು :

ರಾಜ್ಯದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ರಾಜ್ಯದಲ್ಲಿರುವ ತೃತೀಯಲಿಂಗಿಗಳ ಜನಗಣತಿ ಮಾಡಲು ನಿರ್ಧರಿಸಿದೆ. ಈ ಸಮೀಕ್ಷೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತದೆ.

ಪ್ರಾಯೋಗಿಕವಾಗಿ ಮೈಸೂರು ಮತ್ತು ವಿಜಯಪುರ ಜಿಲ್ಲೆಗಳನ್ನು ಆಯ್ದುಕೊಳ್ಳಲಾಗಿದೆ. ಮಾರ್ಚ್​ 10 ರಿಂದ 24ರವರೆಗೆ ಸಮೀಕ್ಷೆ ನಡೆಯಲಿದೆ. ಈ ಸಮೀಕ್ಷೆಯಿಂದ ತೃತೀಯಲಿಂಗಿಗಳ ಜನಸಂಖ್ಯೆ ತಿಳಿಯುತ್ತದೆ.

ಹಾಗೆ ಅವರ ಸಾಮಾಜಿಕ ಮತ್ತು ಆರ್ಥಿಕ ಪರೀಸ್ಥಿತಿ ಬಗ್ಗೆಯೂ ಗೊತ್ತಾಗುತ್ತದೆ. ಇದರಿಂದ ಸರ್ಕಾರಕ್ಕೆ ಸಮುದಯಾದ ಸಬಲೀಕರಣಕ್ಕಾಗಿ ನೀತಿಗಳು ಮತ್ತು ಯೋಜನೆಗಳನ್ನು ರೂಪಿಸಲು ಅನುಕೂಲವಾಗುತ್ತದೆ.

ಮೈಸೂರು ಜಿಲ್ಲೆಯಲ್ಲಿ ಮಾರ್ಚ್​ 10 ರಿಂದ ಸಮೀಕ್ಷೆ ಪ್ರಾರಂಭವಾಗಲಿದ್ದು, 45 ದಿನಗಳ ಕಾಲ ಸಮೀಕ್ಷೆ ನಡೆಯುತ್ತದೆ. ಸಮೀಕ್ಷೆಯನ್ನು ತೃತೀಯಲಿಂಗಿಗಳ ಮೂಲಕವೇ ನಡೆಸಲಾಗುತ್ತದೆ. ತಾಲೂಕು ಮಟ್ಟದಲ್ಲಿ ಸಮೀಕ್ಷೆ ನಡೆಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ. ಬಸವರಾಜು ಅವರು ಹೇಳಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮೀಕ್ಷೆಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೈಸೂರಿನ ತೃತೀಯಲಿಂಗಿ ಸಮುದಾಯದ ಪ್ರಮುಖರಲ್ಲಿ ಒಬ್ಬರಾದ ಪ್ರಣತಿ ಪ್ರಕಾಶ್ ಮಾತನಾಡಿ ಈ ಸಮೀಕ್ಷೆಯನ್ನು ತೃತೀಯಲಿಂಗಿ ಸಮುದಾಯದ ಸದಸ್ಯರೇ ನಡೆಸುತ್ತಾರೆ ಎಂದು ವಿವರಿಸಿದರು.

ತೃತೀಯಲಿಂಗಿಗಳ ಸಾಮಾಜಿಕ-ಆರ್ಥಿಕ, ಶೈಕ್ಷಣಿಕ ಮತ್ತು ಇತರ ಜೀವನ ಪರಿಸ್ಥಿತಿಗಳನ್ನು ಕಂಡುಹಿಡಿಯುವುದು ಸಮೀಕ್ಷೆಯ ಹಿಂದಿನ ಆಲೋಚನೆಯಾಗಿದೆ. ಸಮೀಕ್ಷೆಯನ್ನು ತಾಲೂಕು ಕೇಂದ್ರದಲ್ಲಿ ಮಾಡಲಾಗುವುದು.

ನಿಗಧಿತ ದಿನಾಂಕದಂದು ಹತ್ತಿರದ ಪ್ರದೇಶಗಳ ತೃತೀಯಲಿಂಗಿಗಳು ಸಮೀಕ್ಷೆಯಲ್ಲಿ ಭಾಗಿಯಾಗಬೇಕು. ಮುಂಬೈ ಮುಂತಾದ ಮಹಾನಗರಗಳಿಗೆ ವಲಸೆ ಹೋದವರು ನಿಗದಿತ ದಿನದಂದು ಸಮೀಕ್ಷೆಗೆ ಹಾಜರಾಗಬೇಕು ಎಂದರು.

ಮೈಸೂರು ಜಿಲ್ಲೆಯಿಂದ ಒಟ್ಟು 9 ಮಂದಿ ಸಮೀಕ್ಷೆ ನಡೆಸುವ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮೀಕ್ಷೆಯ ನಂತರ, ಎಲ್ಲ ತೃತೀಯಲಿಂಗಿ ವ್ಯಕ್ತಿಗಳಿಗೆ ಗುರುತಿನ ಚೀಟಿಗಳನ್ನು ನೀಡಲಾಗುತ್ತದೆ.

ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಈ ಕಾರ್ಡ್‌ಗಳು ಸಹಾಯವಾಗುತ್ತದೆ. ಈ ಸಮೀಕ್ಷೆಯು ಜಿಲ್ಲೆಯ ಸಮುದಾಯದ ನೈಜ ಚಿತ್ರಣವನ್ನು ನೀಡುವ ನಿರೀಕ್ಷೆಯಿದೆ.