ಉ.ಕ ಸುದ್ದಿಜಾಲ ಹುಬ್ಬಳ್ಳಿ :

ನಟೋರಿಯಸ್ ಕ್ರಿಮಿನಲ್ ಒಬ್ಬನನ್ನು ಜೈಲಿನಿಂದ ಎಸ್ಕೇಪ್​ ಮಾಡಿಸಿದ ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಅಮಿತ್ ನಾಯಕ್ ಎಂದು ಗುರುತಿಸಲಾಗಿದ್ದು, ಈತ ಗೋವಾ ಕ್ರೈಂ ಬ್ರಾಂಚ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕ್ಕಿ ಎಂಬಾತನನ್ನು ಜೈಲಿನಿಂದ ಎಸ್ಕೇಪ್ ಮಾಡಿಸಿ ಅಮಿತ್ ಆತನೊಂದಿಗೆ ಹುಬ್ಬಳ್ಳಿಗೆ ಬಂದಿದ್ದ. ಸುಲೇಮಾನ್ ವಿರುದ್ಧ ಹೈದರಾಬಾದ್, ಪುಣೆ, ದೆಹಲಿ, ಗೋವಾದಲ್ಲಿ ಕೊಲೆ, ಕೊಲೆ ಯತ್ನ, ಬೆದರಿಕೆ, ವಂಚನೆ, ಭೂ ಮಾಫಿಯಾ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದ್ದು, ಸದ್ಯ ಈತನನ್ನು ಗೋವಾದ ಕಾರಾಗೃಹದಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ತಕ್ಕೂ ಹೆಚ್ಚು ರಾಜ್ಯಗಳಿಗೆ ಬೇಕಾಗಿರುವ ನಟೋರಿಯಸ್ ಕ್ರಿಮಿನಲ್‌ ಸುಲೇಮಾನ್ ಸಿದ್ದಿಕಿಯನ್ನು ಬಂಧಿಸಿ ಗೋವಾ ಪೊಲೀಸರು ಜೈಲಿಗೆ ಅಟ್ಟಿದ್ದರು. ಈತನ ಕಾವಲಿಗೆ ಅಮಿತ್‌ನನ್ನು ನೇಮಿಸಲಾಗಿತ್ತು.

ಆದರೆ, ಸುಲೇಮಾನ್ ಸಿದ್ದಿಕಿಯನ್ನು ಶುಕ್ರವಾರ (ಡಿ.13) ಮಧ್ಯರಾತ್ರಿ ಕಸ್ಟಡಿಯಿಂದ ಎಸ್ಕೇಪ್ ಮಾಡಿಸಿದ ಅಮಿತ್ ಆರೋಪಿಯೊಂದಿಗೆ ಪರಾರಿಯಾಗಿದ್ದ ಎಂದರು.

ತಲೆಮರೆಸಿಕೊಳ್ಳಲು ಹುಬ್ಬಳ್ಳಿಗೆ ಬಂದಿದ್ದ ವಿಚಾರ ತಿಳಿದ ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಅಮಿತ್‌ನನ್ನು ಬಂಧಿಸಿದ್ದಾರೆ. ಆರೋಪಿ ಸಿದ್ದಿಕಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.