ಉ.ಕ ಸುದ್ದಿಜಾಲ ಬೆಳಗಾವಿ :
ಪುಣೆಯಿಂದ ಬೆಳಗಾವಿ ಮೂಲಕ ಹುಬ್ಬಳಿಯವರೆಗೆ ವಂದೇ ಭಾರತ್ ರೈಲಿನ ಸಂಚಾರಕ್ಕೆ ಸೆಪ್ಟೆಂಬರ್ 16ರಂದು ಅಹ್ಮದಾಬಾದ್‌ನಿಂದ ವರ್ಚುಯಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಪುಣೆ – ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪುಣೆಯಿಂದ ಸಂಜೆ 4.15ಕ್ಕೆ ಹೊರಟು ರಾತ್ರಿ 9ಕ್ಕೆ ಬೆಳಗಾವಿಗೆ ಆಗಮಿಸಲಿದೆ.
ಈ ಸಂದರ್ಭದಲ್ಲಿ ಬೆಳಗಾವಿ ರೈಲು ನಿಲ್ದಾಣದಲ್ಲಿ ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಹಾಗೂ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈಲು ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪುಣೆಯಿಂದ – ಹುಬ್ಬಳ್ಳಿಗೆ 8 ಗಂಟೆ 30 ನಿಮಿಷದ ಅವಧಿಯಲ್ಲಿ ತಲುಪಲಿದೆ ಎಂದು ತಿಳಿಸಿದರು.
ಹುಬ್ಬಳ್ಳಿ – ಪುಣೆ ಮಧ್ಯೆ ಆರಂಭವಾಗಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸೆಪ್ಟೆಂಬರ್ 16ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈ ರೈಲು ಹುಬ್ಬಳ್ಳಿಯಿಂದ ಸೆಪ್ಟೆಂಬರ್ 18ರಿಂದ ಆರಂಭವಾಗಲಿದೆ. ವಾರದಲ್ಲಿ ಮೂರು ಸಲ (ಬುಧವಾರ, ಶುಕ್ರವಾರ ಹಾಗೂ ರವಿವಾರ) ಹುಬ್ಬಳ್ಳಿಯಿಂದ ಮತ್ತು ಗುರುವಾರ, ಶನಿವಾರ ಮತ್ತು ಸೋಮವಾರದಂದು ಪುಣೆಯಿಂದ ಸಂಚರಿಸಲಿದೆ.
ಹುಬ್ಬಳ್ಳಿ – ಪುಣೆ ಸಂಪರ್ಕದಿಂದ ಈ ಭಾಗದ ವಾಣಿಜ್ಯೋದ್ಯಮ, ಕೈಗಾರಿಕಾ ವಸಹಾತುಗಳಿಗೆ ತುಂಬಾ ಅನಕೂಲವಾಗಲಿದೆ. ಮತ್ತು ಮುಂಬೈ ಸಂಪರ್ಕಕ್ಕೆ ಈ ಮಾರ್ಗ ಅತ್ಯಂತ ಪ್ರಮುಖವಾಗಿದೆ ಎಂಬುದನ್ನು ರೈಲ್ವೆ ಮಂತ್ರಿಗಳ ಗಮನಕ್ಕೆ ತರಲಾಗಿತ್ತು.
ಅವರು ಮನವಿಗೆ ಸ್ಪಂದನೆ ನೀಡಿ ರೈಲು ಸೇವೆ ಆರಂಭಿಸುತ್ತಿರುವುದು ಸಂತೋಷದ ವಿಷಯ. ಈ ಮಹತ್ವದ ಕೊಡುಗೆಯನ್ನು ನೀಡಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೇಲ್ವೆ ಸಚಿವ ಅಶ್ಬಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ನಮ್ಮ ಉತ್ತರ ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳು ಅರ್ಪಿಸಿದ್ದೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ರೈಲಿನ ಸಮಯ :
ರೈಲು ಸಂ. 20669 ಬೆಳಗ್ಗೆ 5ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು 5.15ಕ್ಕೆ ಧಾರವಾಡ, 6.55ಕ್ಕೆ ಬೆಳಗಾವಿ, 9.15ಕ್ಕೆ ಮೀರಜ್, 9.30ಕ್ಕೆ ಸಾಂಗ್ಲಿ, 10.35ಕ್ಕೆ ಸತಾರಾ ಹಾಗೂ 1.30ಕ್ಕೆ ಪುಣೆ ತಲುಪಲಿದೆ.
ರೈಲು ಸಂ. 20670 ಮಧ್ಯಾಹ್ನ 2.15ಕ್ಕೆ ಪುಣೆಯಿಂದ ಹೊರಟು ಸಂಜೆ 4.08ಕ್ಕೆ ಸತಾರಾ, 6.10ಕ್ಕೆ ಸಾಂಗಲಿ, 6.40ಕ್ಕೆ ಮೀರಜ್, ರಾತ್ರಿ 8.35ಕ್ಕೆ ಬೆಳಗಾವಿ, 10.20ಕ್ಕೆ ಧಾರವಾಡ ಹಾಗೂ 10.45ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ತಲುಪಲಿದೆ.
ಪ್ರಾಯೋಗಿಕ ಸಂಚಾರ ಯಶಸ್ವಿ: ಹುಬ್ಬಳ್ಳಿ–ಪುಣೆ ಮಧ್ಯೆ ಸೆ.16ರಿಂದ ಆರಂಭವಾಗಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗುರುವಾರ ಪ್ರಾಯೋಗಿಕವಾಗಿ ಸಂಚರಿಸಿತು. ಹುಬ್ಬಳ್ಳಿಯಿಂದ ಹೊರಟ ರೈಲು ಧಾರವಾಡ ಮಾರ್ಗವಾಗಿ ಸಂಚರಿಸಿ, ಮಧ್ಯಾಹ್ನ 12.19ಕ್ಕೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸಿತು. ಬಳಿಕ ಬೆಳಗಾಯಿಂದ ಮೀರಜ್ ಮಾರ್ಗವಾಗಿ ಪುಣೆಯತ್ತ ಸಾಗಿತು. ರೈಲಿನ ಒಳಗೆ ಹೋಗಿ ಆಸನಗಳು ಮತ್ತು ಸೌಲಭ್ಯಗಳನ್ನು ಆಸಕ್ತಿಯಿಂದ ಜನರು ಕಣ್ತುಂಬಿಕೊಂಡರು.