ಉ.ಕ ಸುದ್ದಿಜಾಲ ಮೈಸೂರು :
ಕಬ್ಬು ದರ ನಿಗದಿಗೆ ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಿ ರಾಜ್ಯಾದ್ಯಂತ 27 ರಂದು ರಸ್ತೆ ತಡೆ ಚಳವಳಿ ನಡೆಸಲಾಗುತ್ತದೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಕಬ್ಬಿನ ಎಫ್ ಆರ್ ಪಿ ದರಕ್ಕೆ ಹೆಚ್ಚುವರಿ ದರ ನಿಗದಿಪಡಿಸಲು ಮಂತ್ರಿಗಳು ನಾಲ್ಕು ಸಭೆಗಳನ್ನು ನಡೆಸಿ ಯಾವುದೇ ತೀರ್ಮಾನ ಕೈಗೊಳ್ಳದೆ ಮುಂದೂಡುತ್ತಿದ್ದಾರೆ. ಇದು ಕಬ್ಬು ಬೆಳೆದ ರೈತರಿಗೆ ಬಗೆದ ದ್ರೋಹವಾಗಿದೆ.
ರಾಜ್ಯದ ಕಬ್ಬು ಬೆಳೆಗಾರ ರೈತರು ನಾಲ್ಕು ತಿಂಗಳಿಂದಲೂ ಹೋರಾಟ ನಡೆಸುತ್ತಿದ್ದರು ಯಾವುದೇ ಎಂಎಲ್ಎ, ಎಂಪಿ ,ಮಂತ್ರಿಗಳು, ಈ ಬಗ್ಗೆ ಮಾತನಾಡದೆ ಇರುವುದು ಅನುಮಾನ ಉಂಟು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
30 ಲಕ್ಷ ಕಬ್ಬು ಬೆಳೆಗಾರರ 40,000 ಕೋಟಿ ವೈಹಿವಾಟು ನಡೆಸುವ ಈ ಉದ್ಯಮ ಸರ್ಕಾರಕ್ಕೆ ಲಾಭ ತರುತ್ತಿಲ್ಲವೇ? 5,000 ಕೋಟಿ ವ್ಯವಹಾರ ನಡೆಸುವ ಅಡಿಕೆ ಬೆಳೆಗಾರರ ಬಗ್ಗೆ ಕೇಂದ್ರಕ್ಕೆ ನಿಯೋಗ ಹೋಗಿ ಮನವಿ ಮಾಡುವ ರಾಜ್ಯದ ಗೃಹ ಸಚಿವರಿಗೆ ಹಾಗೂ ಎಂಪಿಗಳಿಗೆ ಕಬ್ಬು ಬೆಳೆಗಾರರ ಗೂಳಾಟ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯಸರ್ಕಾರ, ಜನಪ್ರತಿನಿಧಿಗಳನ್ನು ಎಚ್ಚರಿಸಲು ಅ.27 ರಂದು ರಾಜ್ಯಾದ್ಯಂತ 11 ರಿಂದ 1 ಗಂಟೆ ತನಕ ರಸ್ತೆ ತಡೆ ಚಳುವಳಿ ನಡೆಸಲಾಗುತ್ತದೆ. ಅ.31ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ನಡೆಸಲಾಗುವುದು. ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ಕಾರ್ಖಾನೆಗಳು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ.
ಕಬ್ಬು ಕಟಾವು 16 ತಿಂಗಳಾಗುತಿದೆ ರಾಜ್ಯ ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ರೈತನ ಜಮೀನಿನಿಂದ ಕಾರ್ಖಾನೆ ನಡುವೆ ಇರುವ ಕಿಲೋಮೀಟರ್ ಆಧಾರದ ದರ ಕಡಿತ ಮಾಡಬೇಕು, ಕಾನೂನು ಬಾಹಿರವಾಗಿ ಹೆಚ್ಚುವರಿ ಮಾಡಿದರೆ ಆಯಾ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಚೀಟಿಂಗ್ ಕೇಸ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಶಾಂತಕುಮಾರ್ ಒತ್ತಾಯಿಸಿದ್ದಾರೆ.