ಉ.ಕ ಸುದ್ದಿಜಾಲ ಮೈಸೂರು :
ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂಬ ಪ್ರಶ್ನೆಯನ್ನಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಹಾಗೂ ಕರ್ನಾಟಕ ಬಿಜೆಪಿ ನಡುವೆ ವಾಗ್ಯುದ್ಧವೇ ಆರಂಭವಾಗಿತ್ತು. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಪ್ರತಾಪ್ ಸಿಂಹ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯನ್ನು ಯಾರು ಮಾಡಿದ್ದು, ಅದರ ಕ್ರೆಡಿಟ್ ಯಾರಿಗೆ ಸಲ್ಲಬೇಕು ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ದಶಪಥದ ಹೆದ್ದಾರಿಯ ಶ್ರೇಯಸ್ಸು ಒಬ್ಬರಿಗೇ ಸಲ್ಲಬೇಕು.
ಅದು ಪ್ರಧಾನ ನರೇಂದ್ರ ಮೋದಿಯವರಿಗೇ ಸಲ್ಲಬೇಕು. ಅವರಿಲ್ಲದಿದ್ದರೆ ನಾನು ಎಂಪಿಯೂ ಆಗ್ತಾ ಇರಲಿಲ್ಲ, ಗಡ್ಕರಿಯವರು ಹೆದ್ದಾರಿ ಸಚಿವರೂ ಆಗ್ತಾ ಇರಲಿಲ್ಲ’ ಎಂದು ಹೇಳಿದ್ದಾರೆ. ಇದೇ ಟ್ವೀಟ್ ನಲ್ಲಿ ತಮ್ಮದು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇರುವ ಫೋಟೋ ಇರುವ ಗ್ರಾಫಿಕ್ಸ್ ಕಾರ್ಡ್ ಹಾಕಿದ್ದಾರೆ.
ಅದರಲ್ಲಿ, ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೈವೇ ಕ್ರೆಡಿಟ್ ಯಾರಿಗೆ ಸಲ್ಲಬೇಕು ಎಂಬ ಪ್ರಶ್ನೆಗೆ ಜನರು ಕೊಟ್ಟ ಉತ್ತರ ಶೀರ್ಷಿಕೆಯನ್ನು ಹಾಕಲಾಗಿದೆ. ಇತ್ತೀಚೆಗೆ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ಹೈವೇ ನಿರ್ಮಿಸಿದ ಶ್ರೇಯಸ್ಸು ನಮಗೆ ಸಲ್ಲಬೇಕು, ನಾವೇ ಮೊದಲು ಅದನ್ನು ಶುರು ಮಾಡಿದ್ದು ಎಂದು ಕಾಂಗ್ರೆಸ್ ನವರು ವಾದ ಮಂಡಿಸಿದ್ದರು.
ಈ ಕುರಿತಂತೆ ಮಾತನಾಡಿದ್ದ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯನ್ನು ನಿರ್ಮಿಸಲು ಕಾಂಗ್ರೆಸ್ಸೇ ಕಾರಣ. ಇದು ಕಾಂಗ್ರೆಸ್ ನಾಯಕರಾದ ದಿವಂಗತ ಆಸ್ಕರ್ ಫರ್ನಾಂಡಿಸ್ ಅವರ ಕನಸಿನ ಕೂಸು ಎಂದಿದ್ದರು.
ಆಸ್ಕರ್ ಫರ್ನಾಂಡಿಸ್ ಅವರೇ ಈ ಹೆದ್ದಾರಿಯ ಯೋಜನೆ ಜಾರಿಗೆ ಹೆಚ್ಚು ಶ್ರಮಿಸಿದ್ದರು. ಈ ಯೋಜನೆಗೆ ಅವರೇ ಅಡಿಪಾಯ ಹಾಕಿದ್ದು” ಎಂದು ಹೇಳಿದ್ದರು. ಜೆಡಿಎಸ್ ಶಾಸಕ ಪುಟ್ಟಸ್ವಾಮಿ, ಈ ಹೆದ್ದಾರಿಯ ಶ್ರೇಯಸ್ಸು ಜೆಡಿಎಸ್ ಗೂ ಸಲ್ಲಬೇಕು. ಏಕೆಂದರೆ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯ ಪ್ರಸ್ತಾವನೆಗೆ ಅನುಮೋದನೆ ನೀಡಿ,
ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕಳುಹಿಸಲಾಗಿತ್ತು. ಅವರು ಒಪ್ಪದೇ ಇದ್ದಿದ್ದರೆ ಈ ಯೋಜನೆ ಹೇಗೆ ಜಾರಿಯಾಗುತ್ತಿತ್ತು? ಹಾಗಾಗಿ, ಈ ಯೋಜನೆಯ ಶ್ರೇಯಸ್ಸು ಜೆಡಿಎಸ್ ಗೂ ಸಲ್ಲಬೇಕು ಎಂದು ಹೇಳಿದ್ದರು.